IPL 2025: ಕನ್ನಡಿಗನ ಕನಸು ಭಗ್ನ: ಐಪಿಎಲ್ನಿಂದ ಔಟ್
IPL 2025: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್ 2025) ಕರ್ನಾಟಕದ 14 ಆಟಗಾರರು ಸ್ಥಾನ ಪಡೆದಿದ್ದಾರೆ. ಈ ಮೊದಲು ಹರಾಜಿನ ಮೂಲಕ 13 ಆಟಗಾರರು ಆಯ್ಕೆಯಾಗಿದ್ದರೆ, ಇದೀಗ ಬದಲಿ ಆಟಗಾರನಾಗಿ ಕನ್ನಡಿಗ ಸ್ಮರಣ್ ರವಿಚಂದ್ರನ್ ಎಸ್ಆರ್ಹೆಚ್ ತಂಡದಲ್ಲಿ ಸ್ಥಾನ ಪಡೆದಿದ್ದರು.
Updated on: May 05, 2025 | 11:30 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ಗೆ ಬದಲಿ ಆಟಗಾರನಾಗಿ ಎಂಟ್ರಿ ಕೊಟ್ಟಿದ್ದ ಕರ್ನಾಟಕದ ಸ್ಪೋಟಕ ಎಡಗೈ ದಾಂಡಿಗ ಸ್ಮರಣ್ ರವಿಚಂದ್ರನ್ (Smaran Ravichandran) ಇದೀಗ ಐಪಿಎಲ್ನಿಂದ ಹೊರಬಿದ್ದಿದ್ದಾರೆ. ಎಸ್ಆರ್ಹೆಚ್ ತಂಡಕ್ಕೆ ಆಯ್ಕೆಯಾಗಿದ್ದ ಸ್ಮರಣ್ ಅವರು ಗಾಯಗೊಂಡಿದ್ದು, ಹೀಗಾಗಿ ಅವರನ್ನು ತಂಡದಿಂದ ಕೈ ಬಿಡಲಾಗಿದೆ.

ಇದಕ್ಕೂ ಮುನ್ನ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದ ಆಸ್ಟ್ರೇಲಿಯಾ ಸ್ಪಿನ್ನರ್ ಆ್ಯಡಂ ಝಂಪಾ ಗಾಯಗೊಂಡಿದ್ದರು. ಹೀಗಾಗಿ ಅವರ ಬದಲಿಗೆ ಕರ್ನಾಟಕದ ಎಡಗೈ ದಾಂಡಿಗ ಸ್ಮರಣ್ ರವಿಚಂದ್ರನ್ ಅವರನ್ನು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಆಯ್ಕೆ ಮಾಡಿಕೊಂಡಿತ್ತು.

ಅದರಂತೆ ಏಪ್ರಿಲ್ 14 ರಂದು ಸನ್ರೈಸರ್ಸ್ ಹೈದರಾಬಾದ್ ಬಳಗವನ್ನು ಸೇರಿಕೊಂಡಿದ್ದ ಸ್ಮರಣ್ ರವಿಚಂದ್ರನ್ ಅಭ್ಯಾಸ ವೇಳೆ ಗಾಯಗೊಂಡಿದ್ದಾರೆ. ಹೀಗಾಗಿ ಅವರನ್ನು ಎಸ್ಆರ್ಹೆಚ್ ತಂಡದಿಂದ ಕೈ ಬಿಡಲಾಗಿದ್ದು, ಅವರ ಬದಲಿಗೆ ವಿದರ್ಭದ ಆಲ್ರೌಂಡರ್ ಹರ್ಷ್ ದುಬೆಯನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ತಿಳಿಸಿದೆ. ಇದರೊಂದಿಗೆ ಚೊಚ್ಚಲ ಐಪಿಎಲ್ ಪಂದ್ಯವಾಡುವ ಸ್ಮರಣ್ ರವಿಚಂದ್ರನ್ ಅವರ ಕನಸು ಕೂಡ ಕಮರಿದೆ.

21 ವರ್ಷದ ಸ್ಮರಣ್ ರವಿಚಂದ್ರನ್ ಕಳೆದ ವರ್ಷ ನಡೆದ ಮಹಾರಾಜ ಟಿ20 ಲೀಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಗುಲ್ಬರ್ಗ ಮಿಸ್ಟಿಕ್ಸ್ ಪರ ಕಣಕ್ಕಿಳಿದಿದ್ದ ಸ್ಮರಣ್ ಕೇವಲ 9 ಇನ್ನಿಂಗ್ಸ್‌ಗಳಿಂದ 43.14 ರ ಸರಾಸರಿಯಲ್ಲಿ 302 ರನ್ ಬಾರಿಸಿದ್ದರು. ಅದು ಸಹ 145.19 ರ ಅದ್ಭುತ ಸ್ಟ್ರೈಕ್ ರೇಟ್ನಲ್ಲಿ ಎಂಬುದು ವಿಶೇಷ.

ಅಲ್ಲದೆ 2024ರ ಮಹಾರಾಜ ಟಿ20 ಟೂರ್ನಿಯಲ್ಲಿ ಒಂದು ಶತಕ ಹಾಗೂ 2 ಅರ್ಧಶತಕಗಳನ್ನು ಸಹ ಬಾರಿಸಿ ಅಬ್ಬರಿಸಿದ್ದರು. ಈ ಭರ್ಜರಿ ಪ್ರದರ್ಶನದ ಫಲವಾಗಿ ಸ್ಮರಣ್ ರವಿಚಂದ್ರನ್ ಅವರನ್ನು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಬದಲಿ ಆಟಗಾರನಾಗಿ ತಂಡಕ್ಕೆ ಆಯ್ಕೆ ಮಾಡಿಕೊಂಡಿತ್ತು. ಆದರೀಗ ಗಾಯಗೊಂಡು ಅರ್ಧದಲ್ಲೇ ಐಪಿಎಲ್ ಅಭಿಯಾನವನ್ನು ಅಂತ್ಯಗೊಳಿಸಿದ್ದಾರೆ.
