IPL 2025: ಕೊಲೆ ಬೆದರಿಕೆಯ ನಡುವೆ ಮೊಹಮ್ಮದ್ ಶಮಿಗೆ ತಂಡದಿಂದ ಗೇಟ್ಪಾಸ್
Mohammed Shami Dropped from SRH Playing XI: ಐಪಿಎಲ್ 2025ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದಿಂದ ಮೊಹಮ್ಮದ್ ಶಮಿ ಅವರನ್ನು ಆಡುವ ಹನ್ನೊಂದರ ಬಳಗದಿಂದ ಕೈಬಿಡಲಾಗಿದೆ. ಶಮಿ ಅವರ ಕಳಪೆ ಪ್ರದರ್ಶನವೇ ಇದಕ್ಕೆ ಕಾರಣ ಎನ್ನಲಾಗಿದೆ. ಅದೇ ದಿನ, ಅವರಿಗೆ ಜೀವ ಬೆದರಿಕೆ ಇಮೇಲ್ ಬಂದಿದೆ ಎಂದು ವರದಿಯಾಗಿದೆ. ಶಮಿ ಅವರ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ.
Updated on:May 05, 2025 | 8:22 PM

ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ ಒಂದೇ ದಿನ ಎರಡೆರಡು ಆಘಾತಗಳು ಎದುರಾಗಿವೆ. ಮೊದಲನೆಯದ್ದಾಗಿ ಶಮಿಗೆ ಕೊಲೆ ಬೆದರಿಕೆಯ ಈ ಮೇಲ್ ಬಂದಿದ್ದರೆ, ಎರಡನೇಯದ್ದಾಗಿ ಅವರನ್ನು ಆಡುವ ಹನ್ನೊಂದರ ಬಳಗದಿಂದ ಕೈಬಿಡಲಾಗಿದೆ.

ಐಪಿಎಲ್ 2025 ರಲ್ಲಿ ಮೊಹಮ್ಮದ್ ಶಮಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಆಡುತ್ತಿದ್ದಾರೆ. ಅನುಭವದ ಆಧಾರದ ಮೇಲೆ ತಂಡದ ಬೌಲಿಂಗ್ ಜೀವಾಳವೇ ಆಗಿರುವ ಶಮಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಿಂದ ಕೈಬಿಡಲಾಗಿದೆ. ಅಂದರೆ ಸನ್‌ರೈಸರ್ಸ್ ಹೈದರಾಬಾದ್ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಿಲ್ಲ.

ವಾಸ್ತವವಾಗಿ ಈ ಪಂದ್ಯದಲ್ಲಿ ಶಮಿ ತಂಡದಲ್ಲಿದ್ದರಾದರೂ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ತಂಡದಲ್ಲಿ ಇರಿಸಲಾಗಿತ್ತು. ಹೈದರಾಬಾದ್ ಮೊದಲು ಬೌಲಿಂಗ್ ಮಾಡುತ್ತಿರುವುದರಿಂದ ಶಮಿ ಆಡುವ ಅವಕಾಶ ಇಲ್ಲದಂತ್ತಾಗಿದೆ. ಮೊಹಮ್ಮದ್ ಶಮಿ ಅವರನ್ನು ತಂಡದಿಂದ ಹೊರಗಿಡಲು ಯಾವುದೇ ಗಾಯದ ಕಾರಣವಲ್ಲ, ಬದಲಿಗೆ ಅವರ ಕಳಪೆ ಪ್ರದರ್ಶನವೇ ಕಾರಣ.

ಐಪಿಎಲ್ 2025 ರಲ್ಲಿ ಮೊಹಮ್ಮದ್ ಶಮಿ ಅವರ ಪ್ರದರ್ಶನ ಅಷ್ಟೇನೂ ಉತ್ತಮವಾಗಿಲ್ಲ. ವಿಶ್ವದ ಅತ್ಯುತ್ತಮ ವೇಗಿಗಳಲ್ಲಿ ಒಬ್ಬರಾದ ಶಮಿ ಈ ಸೀಸನ್‌ನಲ್ಲಿ ಆಡಿರುವ 9 ಪಂದ್ಯಗಳಲ್ಲಿ ಕೇವಲ 6 ವಿಕೆಟ್‌ಗಳನ್ನು ಮಾತ್ರ ಪಡೆದಿದ್ದಾರೆ. ದೊಡ್ಡ ವಿಷಯವೆಂದರೆ ಅವರ ಎಕಾನಮಿ ದರ ಪ್ರತಿ ಓವರ್‌ಗೆ 11.23 ಆಗಿದೆ. ಇದೇ ಕಾರಣಕ್ಕೆ ಶಮಿ ಅವರನ್ನು ಆಡುವ ಹನ್ನೊಂದರ ತಂಡದಿಂದ ಕೈಬಿಡಲಾಗಿದೆ.

ಇನ್ನೊಂದೆಡೆ ಮೊಹಮ್ಮದ್ ಶಮಿಗೆ ಜೀವ ಬೆದರಿಕೆ ಹಾಕಲಾಗಿದೆ. ಭಾನುವಾರ ರಾತ್ರಿ, ರಜಪೂತ್ ಸಿಂಧರ್ ಎಂಬ ವ್ಯಕ್ತಿ, ಶಮಿ ಅವರಿಗೆ ಇಮೇಲ್ ಕಳುಹಿಸಿ ಕೊಲೆ ಬೆದರಿಕೆ ಹಾಕಿದ್ದಾನೆ. ಈ ಪ್ರಕರಣದ ಬಗ್ಗೆ ಶಮಿ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ XI- ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಸಚಿನ್ ಬೇಬಿ, ಹೆನ್ರಿಚ್ ಕ್ಲಾಸೆನ್, ಅನಿಕೇತ್ ವರ್ಮಾ, ಅಭಿನವ್ ಮನೋಹರ್, ಪ್ಯಾಟ್ ಕಮಿನ್ಸ್, ಹರ್ಷಲ್ ಪಟೇಲ್, ಜಯದೇವ್ ಉನದ್ಕತ್, ಜೀಶನ್ ಅನ್ಸಾರಿ, ಎಹ್ಸಾನ್ ಮಾಲಿಂಗ.

ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ XI- ಫಾಫ್ ಡು ಪ್ಲೆಸಿಸ್, ಅಭಿಷೇಕ್ ಪೊರೆಲ್, ಕರುಣ್ ನಾಯರ್, ಕೆಎಲ್ ರಾಹುಲ್, ಅಕ್ಷರ್ ಪಟೇಲ್, ಟ್ರಿಸ್ಟಾನ್ ಸ್ಟಬ್ಸ್, ವಿಪರಾಜ್ ನಿಗಮ್, ಮಿಚೆಲ್ ಸ್ಟಾರ್ಕ್, ದುಷ್ಮಂತ ಚಮೀರಾ, ಕುಲ್ದೀಪ್ ಯಾದವ್, ಟಿ ನಟರಾಜನ್.
Published On - 8:22 pm, Mon, 5 May 25
