RCB ರೆಕಾರ್ಡ್ ಉಡೀಸ್: ಹೊಸ ವಿಶ್ವ ದಾಖಲೆ ನಿರ್ಮಿಸಿದ SRH
IPL 2025 SRH vs RR: ಆರ್ಆರ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡವು 20 ಓವರ್ಗಳಲ್ಲಿ 286 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ರಾಜಸ್ತಾನ್ ರಾಯಲ್ಸ್ ತಂಡ 20 ಓವರ್ಗಳಲ್ಲಿ 242 ರನ್ಗಳಿಸಿ, 44 ರನ್ಗಳಿಂದ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಎಸ್ಆರ್ಹೆಚ್ ಪಡೆ ಐಪಿಎಲ್ನಲ್ಲಿ ಹೊಸ ಇತಿಹಾಸವನ್ನು ಸಹ ನಿರ್ಮಿಸಿದ್ದಾರೆ.
Updated on: Mar 24, 2025 | 1:17 PM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ (SRH) ತಂಡದ ಬ್ಯಾಟರ್ಗಳ ಸಿಡಿಲಬ್ಬರ ಮುಂದುವರೆದಿದೆ. ಅದು ಕೂಡ ಮೊದಲ ಪಂದ್ಯದಲ್ಲೇ ದಾಖಲೆ ಮೊತ್ತ ಪೇರಿಸುವ ಮೂಲಕ. ಈ ಗರಿಷ್ಠ ಸ್ಕೋರ್ನೊಂದಿಗೆ ಸನ್ರೈಸರ್ಸ್ ಹೈದರಾಬಾದ್ ಪಡೆ ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಹೈದರಾಬಾದ್ನ ರಾಜೀವ್ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 2ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ 20 ಓವರ್ಗಳಲ್ಲಿ ಬರೋಬ್ಬರಿ 286 ರನ್ ಕಲೆಹಾಕಿದೆ. ಈ 280 ರನ್ಗಳೊಂದಿಗೆ ಎಸ್ಆರ್ಹೆಚ್ ಪಡೆ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಬಾರಿ 250+ ರನ್ಗಳಿಸಿದ ತಂಡ ಎನಿಸಿಕೊಂಡಿದೆ.

ಇದಕ್ಕೂ ಮುನ್ನ ಈ ದಾಖಲೆ ಇಂಗ್ಲೆಂಡ್ನ ಕೌಂಟಿ ಟೀಮ್ ಸರ್ರೆ ತಂಡ ಹೆಸರಿನಲ್ಲಿತ್ತು. ಸರ್ರೆ ತಂಡವು ಟಿ20 ಕ್ರಿಕೆಟ್ನಲ್ಲಿ 3 ಬಾರಿ (258, 252, 250) 250+ ರನ್ ಕಲೆಹಾಕಿದ್ದರು. ಇದು ಟಿ20 ಕ್ರಿಕೆಟ್ನ ಈವರೆಗಿನ ಶ್ರೇಷ್ಠ ಸಾಧನೆಯಾಗಿತ್ತು. ಇದೀಗ ಈ ದಾಖಲೆಯನ್ನು ಸನ್ರೈಸರ್ಸ್ ಹೈದರಾಬಾದ್ ಪಡೆ ಅಳಿಸಿ ಹಾಕಿದೆ.

ಸನ್ರೈಸರ್ಸ್ ಹೈದರಾಬಾದ್ ತಂಡವು ಒಟ್ಟು 4 ಬಾರಿ ಟಿ20 ಕ್ರಿಕೆಟ್ನಲ್ಲಿ 250+ ಸ್ಕೋರ್ಗಳಿಸಿದೆ. ಕಳೆದ ಸೀಸನ್ನಲ್ಲಿ ಆರ್ಸಿಬಿ ವಿರುದ್ಧ 287, ಮುಂಬೈ ಇಂಡಿಯನ್ಸ್ ವಿರುದ್ಧ 277 ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 266 ರನ್ ಬಾರಿಸಿದ್ದ ಎಸ್ಆರ್ಹೆಚ್ ಇದೀಗ ರಾಜಸ್ಥಾನ್ ರಾಯಲ್ಸ್ ವಿರುದ್ಧ 286 ರನ್ ಸಿಡಿಸಿ ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದೆ.

ಇನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ಮೊದಲ 6 ಓವರ್ಗಳಲ್ಲಿ 94 ರನ್ ಸಿಡಿಸಿದ್ದರು. ಈ ಮೂಲಕ ಕಳೆದ ಸೀಸನ್ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಪವರ್ಪ್ಲೇನಲ್ಲಿ 92 ರನ್ ಬಾರಿಸಿದ್ದ ಆರ್ಸಿಬಿ ತಂಡದ ದಾಖಲೆಯನ್ನು ಎಸ್ಆರ್ಹೆಚ್ ಮುರಿದಿದೆ.

ಇನ್ನು ಐಪಿಎಲ್ ಇತಿಹಾಸದಲ್ಲಿ ಪವರ್ಪ್ಲೇನಲ್ಲಿ ಅತ್ಯಧಿಕ ಸ್ಕೋರ್ ಗಳಿಸಿದ ದಾಖಲೆ ಕೂಡ ಸನ್ರೈಸರ್ಸ್ ಹೈದರಾಬಾದ್ ತಂಡದ ಹೆಸರಿನಲ್ಲಿದೆ. ಎಸ್ಆರ್ಹೆಚ್ ಪಡೆಯು ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ 6 ಓವರ್ಗಳಲ್ಲಿ 125 ರನ್ ಬಾರಿಸಿ ಈ ಭರ್ಜರಿ ವಿಶ್ವ ದಾಖಲೆಯನ್ನು ನಿರ್ಮಿಸಿದೆ.
























