- Kannada News Photo gallery Cricket photos SRH's Record-Breaking IPL 2025 Debut: 286 Runs, Ishan Kishan Century!
IPL 2025: ಬೆಟ್ಟದಷ್ಟು ರನ್; ಐಪಿಎಲ್‌ನಲ್ಲಿ 2ನೇ ಅತ್ಯಧಿಕ ಮೊತ್ತ ದಾಖಲಿಸಿದ ಹೈದರಾಬಾದ್
SRH's Record-Breaking IPL 2025 Debut: ಐಪಿಎಲ್ 2025ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದೆ. ಇಶಾನ್ ಕಿಶನ್ ಅವರ ಶತಕದ ನೆರವಿನಿಂದ 286 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿದೆ. ಇದು ಐಪಿಎಲ್ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ಮೊತ್ತವಾಗಿದೆ.
Updated on: Mar 23, 2025 | 6:32 PM

ನಿರೀಕ್ಷೆಯಂತೆ ಸನ್‌ರೈಸರ್ಸ್ ಹೈದರಾಬಾದ್ ತಂಡ ಮತ್ತೊಮ್ಮೆ ಬೌಲರ್ಗಳ ಮಾರಣ ಹೋಮ ನಡೆಸಿದೆ. ಐಪಿಎಲ್ 2025 ರಲ್ಲಿ ತನ್ನ ಮೊದಲ ಪಂದ್ಯದಲ್ಲೇ ರನ್‌ಗಳ ಸುನಾಮಿ ಎಬ್ಬಸಿದ ಹೈದರಾಬಾದ್ ತಂಡದ ಬ್ಯಾಟ್ಸ್ಮನ್ಗಳು ರಾಜಸ್ಥಾನ್ ರಾಯಲ್ಸ್ ವಿರುದ್ಧ ಬೆಟ್ಟದಷ್ಟು ರನ್ಗಳನ್ನು ಕಲೆಹಾಕಿ ಐಪಿಎಲ್ ಇತಿಹಾಸದಲ್ಲಿ ಎರಡನೇ ಅತಿದೊಡ್ಡ ರನ್ ಕಲೆಹಾಕಿದ ದಾಖಲೆ ಬರೆದಿದೆ.

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಹೀಗಾಗಿ ತಂಡ ಮೊದಲ 6 ಓವರ್‌ಗಳಲ್ಲಿ ಬರೋಬ್ಬರಿ 94 ರನ್ ಕಲೆಹಾಕಿತು. ಇದು ಐಪಿಎಲ್ ಇತಿಹಾಸದಲ್ಲಿ ಪವರ್‌ಪ್ಲೇನಲ್ಲಿ ದಾಖಲಾದ ಮೂರನೇ ಅತ್ಯಧಿಕ ಮೊತ್ತವಾಗಿದೆ. ಮೊದಲೆರಡು ದಾಖಲೆಗಳು ಕೂಡ ಹೈದರಾಬಾದ್ ಹೆಸರಿನಲ್ಲಿದೆ.

ಇದೇ ವೇಳೆ ಸ್ಫೋಟಕ ಬ್ಯಾಟರ್ ಟ್ರಾವಿಸ್ ಕೂಡ ಕೇವಲ 21 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಅಂತಿಮವಾಗಿ ಹೆಡ್ 31 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಸಹಿತ 67 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ಆದಾಗ್ಯೂ ಹೆಡ್ ಔಟಾಗುವುದಕ್ಕೂ ಮುನ್ನ ತಮ್ಮ ಕೆಲಸವನ್ನು ಮಾಡಿ ಮುಗಿಸಿದ್ದರು.

ಹೆಡ್ ವಿಕೆಟ್ ಪತನದ ನಂತರ ಆಕ್ರಮಣಕಾರಿ ಆಟವನ್ನು ಮುಂದುವರೆಸಿದ ಇಶಾನ್ ಕಿಶನ್ ಕೇವಲ 25 ಎಸೆತಗಳಲ್ಲಿ 200 ಸ್ಟ್ರೈಕ್ ರೇಟ್‌ನಲ್ಲಿ ಅರ್ಧಶತಕ ಪೂರೈಸಿದರು. ಕಿಶನ್ ಆರ್ಭಟದ ಫಲವಾಗಿ ಹೈದರಾಬಾದ್ ತಂಡ ಕೇವಲ 14 ಓವರ್‌ಗಳಲ್ಲಿ 2 ವಿಕೆಟ್‌ಗೆ 200 ರನ್ ದಾಟಿತು. ಇಶಾನ್ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದಲ್ಲದೆ, ಮೂರನೇ ವಿಕೆಟ್‌ಗೆ ನಿತೀಶ್ ಜೊತೆ ಅರ್ಧಶತಕದ ಜೊತೆಯಾಟವನ್ನು ಪೂರ್ಣಗೊಳಿಸಿದರು.

ಅರ್ಧಶತಕದ ಬಳಿಕ ಇನ್ನಷ್ಟು ಉಗ್ರರೂಪ ತಾಳಿದ ಕಿಶನ್ 45 ಎಸೆತಗಳಲ್ಲಿ ಶತಕ ಗಳಿಸಿದರು. ಇದು ಹೈದರಾಬಾದ್ ಜೊತೆಗಿನ ಇಶಾನ್ ಅವರ ಮೊದಲ ಸೀಸನ್ ಆಗಿದ್ದು, ಮೊದಲ ಪಂದ್ಯದಲ್ಲಿ ಶತಕ ಗಳಿಸುವ ಮೂಲಕ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಅಲ್ಲದೆ ಇದು ಐಪಿಎಲ್ 2025 ರ ಮೊದಲ ಶತಕವೂ ಆಗಿದೆ.

ಕೊನೆಯವರೆಗೂ ಅಜೇಯರಾಗಿ ಉಳಿದ ಇಶಾನ್ 47 ಎಸೆತಗಳಲ್ಲಿ 11 ಬೌಂಡರಿ ಮತ್ತು ಆರು ಸಿಕ್ಸರ್‌ಗಳ ಸಹಾಯದಿಂದ 106 ರನ್ ಗಳಿಸಿದರು. ಇಶಾನ್ ಅವರ ಸ್ಫೋಟಕ ಬ್ಯಾಟಿಂಗ್ನಿಂದಾಗಿ ಹೈದರಾಬಾದ್ ತಂಡ ಅಂತಿಮವಾಗಿ 6 ವಿಕೆಟ್ ಕಳೆದುಕೊಂಡು 286 ರನ್ ಕಲೆಹಾಕಿತು. ಆದಾಗ್ಯೂ ಕೇವಲ 2 ರನ್ಗಳಿಂದ ತನ್ನದೇ ದಾಖಲೆಯನ್ನು ಮುರಿಯುವಲ್ಲಿ ವಿಫಲವಾಯಿತು.

ವಾಸ್ತವವಾಗಿ ಐಪಿಎಲ್‌ನಲ್ಲಿ ಅತಿ ಹೆಚ್ಚು ಸ್ಕೋರ್ ಗಳಿಸಿದ ದಾಖಲೆಯೂ ಹೈದರಾಬಾದ್ ತಂಡದ ಹೆಸರಿನಲ್ಲಿದೆ. ಕಳೆದ ಸೀಸನ್ನಲ್ಲಿ ಆರ್‌ಸಿಬಿ ವಿರುದ್ಧ ಹೈದರಾಬಾದ್ ಮೂರು ವಿಕೆಟ್‌ಗೆ 287 ರನ್ ಗಳಿಸಿತ್ತು, ಇದು ಟೂರ್ನಿಯಲ್ಲಿ ಇದುವರೆಗೆ ಅತ್ಯಧಿಕ ಮೊತ್ತವಾಗಿದೆ.



















