IPL 2026: ಕೆಎಲ್ ರಾಹುಲ್ ಖರೀದಿಗೆ ಮುಂದಾದ KKR
IPL 2026 KL Rahul: ಕೆಎಲ್ ರಾಹುಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಕಳೆದ ಸೀಸನ್ನಲ್ಲಿ 14 ಕೋಟಿ ರೂ.ಗೆ ಖರೀದಿಸಿದ್ದರು. ಅಲ್ಲದೆ ಡೆಲ್ಲಿ ಪರ 13 ಇನಿಂಗ್ಸ್ ಆಡಿದ್ದ ರಾಹುಲ್ ಬರೋಬ್ಬರಿ 539 ರನ್ ಕಲೆಹಾಕಿ ಮಿಂಚಿದ್ದರು. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಆಟಗಾರನನ್ನೇ ಟ್ರೇಡ್ ಮಾಡಿಕೊಳ್ಳಲು ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಮುಂದಾಗಿದೆ.
Updated on: Aug 28, 2025 | 7:54 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜಿಗೂ ಮುನ್ನ ಬಿಗ್ ಡೀಲ್ ಕುದುರಿಸಿಕೊಳ್ಳಲು ಕೊಲ್ಕತ್ತಾ ನೈಟ್ ರೈಡರ್ಸ್ (KKR) ಫ್ರಾಂಚೈಸಿಯು ತೆರೆಮರೆಯ ಪ್ರಯತ್ನಕ್ಕೆ ಕೈ ಹಾಕಿದೆ. ಅದು ಕೂಡ ಸ್ಟಾರ್ ಆಟಗಾರ ಕೆಎಲ್ ರಾಹುಲ್ (KL Rahul) ಅವರಿಗಾಗಿ ಎಂಬುದು ವಿಶೇಷ.

ಹೌದು, ಕೆಎಲ್ ರಾಹುಲ್ ಅವರನ್ನು ಟ್ರೇಡ್ ಮಾಡಿಕೊಳ್ಳಲು ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಮಾತುಕತೆ ಮುಂದುವರೆಸಿದೆ ಎಂದು ವರದಿಯಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಕೆಕೆಆರ್ ಫ್ರಾಂಚೈಸಿ ರಾಹುಲ್ ಮೇಲೆ ಕಣ್ಣಿಟ್ಟಿದೆ ಎಂದು ಸುದ್ದಿಯಾಗಿತ್ತು. ಇದೀಗ ಕನ್ನಡಿಗನ ಖರೀದಿಗಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಟ್ರೇಡ್ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ.

ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಮುಂದಿನ ಸೀಸನ್ಗಾಗಿ ಹೊಸ ನಾಯಕನನ್ನು ಹುಡುಕುತ್ತಿದೆ. ಕಳೆದ ಸೀಸನ್ನಲ್ಲಿ ಅಜಿಂಕ್ಯ ರಹಾನೆ ಮುಂದಾಳತ್ವದಲ್ಲಿ ಕಣಕ್ಕಿಳಿದಿದ್ದ ಕೆಕೆಆರ್ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಈ ಮುಂಬರುವ ಐಪಿಎಲ್ ಹರಾಜಿಗೂ ಮುನ್ನ ಕೆಲ ಆಟಗಾರರನ್ನು ತಂಡದಿಂದ ಕೈ ಬಿಡಲು ನಿರ್ಧರಿಸಿದೆ.

ಐಪಿಎಲ್ ಮಿನಿ ಹರಾಜಿಗೂ ಮುನ್ನ ಹಿರಿಯ ಆಟಗಾರರನ್ನು ಕೈ ಬಿಡಲು ನಿರ್ಧರಿಸಿರುವ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಮತ್ತೊಂದೆಡೆ ಕೆಎಲ್ ರಾಹುಲ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲು ಆಸಕ್ತಿ ಹೊಂದಿದೆ. ಕೆಎಲ್ ರಾಹುಲ್ ಆಯ್ಕೆಯಿಂದ ಕೆಕೆಆರ್ ಫ್ರಾಂಚೈಸಿಯು ತನ್ನ ಮೂರು ಸಮಸ್ಯೆಗಳಿಗೆ ಪರಿಹಾರ ಕಾಣಲು ಬಯಸುತ್ತಿದೆ.

ಅಂದರೆ ಕೆಕೆಆರ್ ತಂಡಕ್ಕೆ ಮುಂದಿನ ಸೀಸನ್ಗೆ ಉತ್ತಮ ನಾಯಕನ ಅಗತ್ಯವಿದೆ. ಇದರ ಜೊತೆಗೆ ವಿಕೆಟ್ ಕೀಪರ್ ಬ್ಯಾಟರ್ನ ಅವಶ್ಯಕತೆ ಕೂಡ ಇದೆ. ಹಾಗೆಯೇ ಅತ್ಯುತ್ತಮ ಆರಂಭಿಕನ ಅಗತ್ಯತೆ ಕೂಡ ಕೆಕೆಆರ್ ತಂಡಕ್ಕಿದೆ. ಇತ್ತ ಕೆಎಲ್ ರಾಹುಲ್ ಅವರನ್ನು ಟ್ರೇಡ್ ಮಾಡಿಕೊಂಡರೆ ಒಂದೇ ಆಯ್ಕೆಯ ಮೂಲಕ ಮೂರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ಅಭಿಷೇಕ್ ನಾಯರ್ ಹಾಗೂ ಕೆಎಲ್ ರಾಹುಲ್ ಜೊತೆಗಿನ ಮಾತುಕತೆ ಯಶಸ್ವಿಯಾದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಕೆಎಲ್ಆರ್ ಹೊರಬರಬಹುದು. ಇಲ್ಲಾ ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಟ್ರೇಡ್ ಡೀಲ್ ಕುದುರಿಸಿ ಕೆಎಲ್ ರಾಹುಲ್ ಅವರನ್ನು ಹರಾಜಿಗೂ ಮುನ್ನ ಕೆಕೆಆರ್ ತಂಡಕ್ಕೆ ಕರೆತರಬಹುದು. ಹೀಗಾಗಿ ಐಪಿಎಲ್ 2026ರ ಮಿನಿ ಹರಾಜಿಗೂ ಮುನ್ನ ಕೆಎಲ್ ರಾಹುಲ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪಾಲಾದರೂ ಅಚ್ಚರಿಪಡಬೇಕಿಲ್ಲ.




