
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಆರಂಭಕ್ಕೂ ಮುನ್ನ ಕೊಲ್ಕತ್ತಾ ನೈಟ್ ರೈಡರ್ಸ್ (KKR) ಫ್ರಾಂಚೈಸಿ ಮೇಜರ್ಸ್ ಸರ್ಜರಿ ಮಾಡುವ ಸೂಚನೆ ನೀಡಿದ್ದಾರೆ. ಅದರ ಮೊದಲ ಹೆಜ್ಜೆಯಾಗಿ ಇದೀಗ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮುಖ್ಯ ತರಬೇತುದಾರ ಬದಲಾಗಿದ್ದಾರೆ.

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಕೋಚ್ ಸ್ಥಾನದಿಂದ ಚಂದ್ರಕಾಂತ್ ಪಂಡಿತ್ ಕೆಳಗಿಳಿದಿದ್ದು, ಅವರ ಸ್ಥಾನಕ್ಕೆ ಅಭಿಷೇಕ್ ನಾಯರ್ ಆಯ್ಕೆಯಾಗಿದ್ದಾರೆ. ಈ ಹಿಂದೆ ಅಭಿಷೇಕ್ ನಾಯರ್ ಕೆಕೆಆರ್ ತಂಡದ ಸಹಾಯಕ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು.

ಅಷ್ಟೇ ಅಲ್ಲದೆ ಗೌತಮ್ ಗಂಭೀರ್ ಟೀಮ್ ಇಂಡಿಯಾ ತರಬೇತುದಾರರಾದ ಆರಂಭದಲ್ಲಿ ಭಾರತ ತಂಡದ ಬ್ಯಾಟಿಂಗ್ ಕೋಚ್ ಆಗಿಯೂ ಅಭಿಷೇಕ್ ನಾಯರ್ ಕಾಣಿಸಿಕೊಂಡಿದ್ದರು. ಆದರೆ ಕಳೆದ ವರ್ಷ ಅವರನ್ನು ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ಸ್ಥಾನದಿಂದ ವಜಾಗೊಳಿಸಲಾಗಿತ್ತು.

ಇತ್ತ ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ಸ್ಥಾನ ಕೈ ತಪ್ಪುತ್ತಿದ್ದಂತೆ ಅಭಿಷೇಕ್ ನಾಯರ್ ಐಪಿಎಲ್ ಮಧ್ಯ ಭಾಗದಲ್ಲಿ ಕೆಕೆಆರ್ ತಂಡಕ್ಕೆ ಮರಳಿದ್ದರು. ಇದಾಗ್ಯೂ ಕಳೆದ ಸೀಸನ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಕಳಪೆ ಪ್ರದರ್ಶನವನ್ನು ಬದಲಿಸಲು ಸಾಧ್ಯವಾಗಿರಲಿಲ್ಲ.

ಇದೀಗ ಕೆಕೆಆರ್ ಮುಖ್ಯ ಕೋಚ್ ಸ್ಥಾನದಿಂದ ಚಂದ್ರಕಾಂತ್ ಪಂಡಿತ್ ಕೆಳಗಿಳಿದಿದ್ದು, ಇದರ ಬೆನ್ನಲ್ಲೇ ಅಭಿಷೇಕ್ ನಾಯರ್ ಅವರಿಗೆ ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. ಇತ್ತ ಅಭಿಷೇಕ್ ನಾಯರ್ ಕೆಕೆಆರ್ ತಂಡ ಕೋಚ್ ಆಗುತ್ತಿದ್ದಂತೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಮಹತ್ವದ ಬದಲಾವಣೆ ಕಂಡು ಬರಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಹೀಗಾಗಿ ಐಪಿಎಲ್ 2026ರ ಹರಾಜಿಗೂ ಮುನ್ನ ಕೆಕೆಆರ್ ತಂಡಕ್ಕೆ ಮೇಜರ್ ಸರ್ಜರಿಯಾದರೂ ಅಚ್ಚರಿಪಡಬೇಕಿಲ್ಲ.
Published On - 2:18 pm, Sun, 26 October 25