
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಮಿನಿ ಹರಾಜಿಗೂ ಮುನ್ನ ಸ್ವಾಪ್ ಡೀಲ್ ಕುದುರಿಸಿಕೊಳ್ಳಲು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಸಜ್ಜಾಗಿದೆ. ಅದು ಸಹ ಸಂಜು ಸ್ಯಾಮ್ಸನ್ ಅವರ ಟ್ರೇಡಿಂಗ್ಗಾಗಿ ಎಂಬುದು ವಿಶೇಷ.

ಅಂದರೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಸಂಜು ಸ್ಯಾಮ್ಸನ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಇಬ್ಬರು ಆಟಗಾರರನ್ನು ನೀಡಲು ನಿರ್ಧರಿಸಿದೆ. ಈ ಸ್ವಾಪ್ ಡೀಲ್ಗೆ ಆರ್ಆರ್ ಕಡೆಯಿಂದ ಸಕರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹೀಗಾಗಿ ಈ ಡೀಲ್ ಕುದುರಿಕೊಳ್ಳಲಿದೆ ಎಂದು ವರದಿಯಾಗಿದೆ.

ಪ್ರಸ್ತುತ ಮಾಹಿತಿ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಸಂಜು ಸ್ಯಾಮ್ಸನ್ಗಾಗಿ ರವೀಂದ್ರ ಜಡೇಜಾ ಹಾಗೂ ಸ್ಯಾಮ್ ಕರನ್ ಅವರನ್ನು ಬಿಟ್ಟು ಕೊಡಲು ನಿರ್ಧರಿಸಿದ್ದಾರೆ. ಅತ್ತ ರಾಜಸ್ಥಾನ್ ರಾಯಲ್ಸ್ ರವೀಂದ್ರ ಜಡೇಜಾ ಜೊತೆ ಡೆವಾಲ್ಡ್ ಬ್ರೆವಿಸ್ ಅವರನ್ನು ನೀಡುವಂತೆ ಕೋರಿಕೊಂಡಿತ್ತು.

ಇದಾಗ್ಯೂ ಸಿಎಸ್ಕೆ ಫ್ರಾಂಚೈಸಿಯು ತನ್ನ ನಿಲುವನ್ನು ಬದಲಿಸಿಲ್ಲ. ಬದಲಾಗಿ ಬ್ರೆವಿಸ್ ಸ್ಥಾನದಲ್ಲಿ ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕರನ್ ಅವರನ್ನು ಬಿಟ್ಟು ಕೊಡುವುದಾಗಿ ತಿಳಿಸಿದೆ. ಈ ಸ್ವಾಪ್ ಡೀಲ್ ಅನ್ನು ರಾಜಸ್ಥಾನ್ ರಾಯಲ್ಸ್ ಒಪ್ಪಿಕೊಳ್ಳುವ ಸಾಧ್ಯತೆ ಹೆಚ್ಚಿದ್ದು, ಅದರಂತೆ ಶೀಘ್ರದಲ್ಲೇ ಆಟಗಾರರ ಬದಲಾವಣೆಯಾಗುವ ಸಾಧ್ಯತೆಯಿದೆ.

ಐಪಿಎಲ್ ಟ್ರೇಡ್ ನಿಯಮಗಳ ಪ್ರಕಾರ, ಈ ಸ್ವಾಪ್ ಡೀಲ್ಗಳಿಗೆ ಆಟಗಾರರ ಒಪ್ಪಿಗೆ ಕೂಡ ಮುಖ್ಯ. ಇದೀಗ ಸಿಎಸ್ಕೆ ಫ್ರಾಂಚೈಸಿ ರವೀಂದ್ರ ಜಡೇಜಾ ಹಾಗೂ ಸ್ಯಾಮ್ ಕರನ್ ಕಡೆಯಿಂದ ಸ್ವಾಪ್ ಡೀಲ್ ಒಪ್ಪಂದದ ಲಿಖಿತ ಒಪ್ಪಿಗೆಯನ್ನು ಎದುರು ನೋಡುತ್ತಿದೆ. ಇಬ್ಬರ ಕಡೆಯಿಂದ ಒಪ್ಪಿಗೆ ಬಂದರೆ ಜಡೇಜಾ ಹಾಗೂ ಕರನ್ ಅವರನ್ನು ನೀಡಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಸಂಜು ಸ್ಯಾಮ್ಸನ್ ಅವರನ್ನು ಖರೀದಿಸಲಿದೆ.
Published On - 8:23 am, Mon, 10 November 25