
ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯವನ್ನು ಗೆದ್ದುಕೊಂಡಿರುವ ಟೀಂ ಇಂಡಿಯಾ ಇದೀಗ ಶನಿವಾರ ನಡೆಯಲಿರುವ ಎರಡನೇ ಟಿ20 ಪಂದ್ಯವನ್ನೂ ಗೆದ್ದು ಸರಣಿಯಲ್ಲಿ ತನ್ನ ಮುನ್ನಡೆಯನ್ನು 2-0 ಗೇರಿಸುವ ತವಕದಲ್ಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ದೊಡ್ಡ ಹಿನ್ನಡೆಯಾಗಿದೆ. ಗಾಯದ ಸಮಸ್ಯೆಯಿಂದಾಗಿ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಎರಡನೇ ಪಂದ್ಯದಿಂದ ಹೊರಗುಳಿದಿದ್ದಾರೆ(PC-PTI).
ಕಿಶನ್ ಅಲಭ್ಯತೆಯ ಬಗ್ಗೆ ಬಿಸಿಸಿಐ ಅಧಿಕೃತ ಮಾಹಿತಿ ನೀಡಿದ್ದು, ‘ಮೊದಲ ಟಿ20 ಪಂದ್ಯದ ವೇಳೆ ಇಶಾನ್ ಕಿಶನ್ ಅವರ ಬಲಗಾಲಿನಲ್ಲಿ ಸೆಳೆತ ಉಂಟಾಗಿದೆ. ಸದ್ಯ ಅವರು ಬಿಸಿಸಿಐ ವೈದ್ಯಕೀಯ ತಂಡದ ನಿಗಾದಲ್ಲಿದ್ದಾರೆ. ಹೀಗಾಗಿ, ಎರಡನೇ ಪಂದ್ಯದಲ್ಲಿ ಕಿಶನ್ ಕಣಕ್ಕಿಳಿಯುವುದಿಲ್ಲ’ ಎಂದಿದೆ(PC-PTI).
ಗುರುವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 4 ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿತ್ತು. ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ, 19.4 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 226 ರನ್ ಗಳಿಸುವ ಮೂಲಕ ಐತಿಹಾಸಿಕ ಗೆಲುವು ಸಾಧಿಸಿತು(PC-PTI).
ಸಾಮಾನ್ಯವಾಗಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಇಶಾನ್ ಕಿಶನ್, ಈ ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ತಿಲಕ್ ವರ್ಮಾ ಮೂರನೇ ಕ್ರಮಾಂಕದಲ್ಲಿ ಆಡಿದ್ದರು. ಆದರೆ, ಇಶಾನ್ ಕೇವಲ 3 ಎಸೆತಗಳನ್ನು ಎದುರಿಸಿ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮಿಚೆಲ್ ಸ್ಯಾಂಟ್ನರ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿದ ಅವರು ಪೆವಿಲಿಯನ್‌ಗೆ ಮರಳಿದರು(PC-PTI).
ಇದೀಗ ಇಶಾನ್ ಕಿಶನ್ ಗಾಯದ ಕಾರಣದಿಂದ ಹೊರಗುಳಿದಿರುವುದು ಭಾರತ ತಂಡದ ಆಯ್ಕೆ ಸಮಿತಿಗೆ ಸವಾಲಾಗಿದೆ. ಅವರ ಅನುಪಸ್ಥಿತಿಯಲ್ಲಿ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಆಗುವ ಸಾಧ್ಯತೆಯಿದೆ. ಕಿಶನ್ ಜಾಗದಲ್ಲಿ ವೈಭವ್ ಸೂರ್ಯವಂಶಿ ಆಡುವ ಸಾಧ್ಯತೆಗಳಿರುವುದರಿಂದ ಆರಂಭಕರಲ್ಲಿ ವೈಭವ್ಗೆ ಯಾರು ತಮ್ಮ ಸ್ಥಾನವನ್ನು ಬಿಟ್ಟುಕೊಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ(PC-PTI).