
ಕೀರ್ತಿಪುರದಲ್ಲಿ ನಡೆದ ಆತಿಥೇಯ ನೇಪಾಳ ವಿರುದ್ಧದ ಟಿ20 ಪಂದ್ಯದಲ್ಲಿ ಕೇವಲ 33 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ನಮೀಬಿಯಾದ ಜಾನ್ ನಿಕೋಲ್ ಲಾಫ್ಟಿ (Jan Nicol Loftie) ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತೀ ವೇಗದ ಶತಕ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ವಿಶ್ವ ದಾಖಲೆ ನೇಪಾಳ ತಂಡದ ಕುಶಾಲ ಮಲ್ಲ ಹೆಸರಿನಲ್ಲಿತ್ತು. ಏಷ್ಯನ್ ಗೇಮ್ಸ್ ಪಂದ್ಯದಲ್ಲಿ ಮಂಗೋಲಿಯಾ ವಿರುದ್ಧ ಕುಶಾಲ್ ಕೇವಲ 34 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.

ಇದೀಗ ನೇಪಾಳ ಆಟಗಾರನ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಜಾನ್ ನಿಕೋಲ್ ಲಾಫ್ಟಿ ನೇಪಾಳ ವಿರುದ್ಧದ ಪಂದ್ಯದಲ್ಲೇ ಮುರಿದಿರುವುದು ಬರೆದಿರುವುದು ವಿಶೇಷ. ಕೇವಲ 33 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಜಾನ್ ಟಿ20 ಕ್ರಿಕೆಟ್ನ ಅತೀ ವೇಗದ ಶತಕದ ಸರದಾರ ಎನಿಸಿಕೊಂಡಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ನಮೀಬಿಯಾ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ಆರಂಭಿಕ ಆಟಗಾರ ಮಲನ್ ಕ್ರುಗರ್ (59) ಅರ್ಧಶತಕ ಬಾರಿಸಿ ಉತ್ತಮ ಆರಂಭ ಒದಗಿಸಿದ್ದರು. ಆದರೆ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದು 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿಕೋಲ್ ಲಾಫ್ಟಿ.

11ನೇ ಓವರ್ ವೇಳೆ ಕ್ರೀಸ್ಗೆ ಆಗಮಿಸಿದ ನಿಕೋಲ್ ಲಾಫ್ಟಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ನೇಪಾಳ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ಲಾಫ್ಟಿ ಕೇವಲ 33 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿ ಹೊಸ ಇತಿಹಾಸ ಬರೆದರು.

ಅಂತಿಮವಾಗಿ 36 ಎಸೆತಗಳನ್ನು ಎದುರಿಸಿದ ನಿಕೋಲ್ ಲಾಫ್ಟಿ 8 ಭರ್ಜರಿ ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ 101 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಈ ಸ್ಪೋಟಕ ಸೆಂಚುರಿ ನೆರವಿನಿಂದ ನಮೀಬಿಯಾ ತಂಡವು 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 206 ರನ್ ಕಲೆಹಾಕಿದೆ.

207 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ನೇಪಾಳ ತಂಡವು 18.5 ಓವರ್ಗಳಲ್ಲಿ 186 ರನ್ಗಳಿಸಿ ಸರ್ವಪತನ ಕಂಡಿದೆ. ಈ ಮೂಲಕ ನಮೀಬಿಯಾ ತಂಡವು 20 ರನ್ಗಳಿಂದ ಮೊದಲ ಟಿ20 ಪಂದ್ಯವನ್ನು ಗೆದ್ದುಕೊಂಡಿದೆ.
Published On - 1:45 pm, Tue, 27 February 24