ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಪಂದ್ಯದ ವೇಳೆ ಬೆನ್ನು ನೋವಿನ ಸಮಸ್ಯೆಗೆ ಸಿಲುಕಿರುವ ಜಸ್ಪ್ರೀತ್ ಬುಮ್ರಾ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲೂ ಕಣಕ್ಕಿಳಿಯುವುದು ಅನುಮಾನ. ಏಕೆಂದರೆ ಬೆನ್ನಿನ ಸ್ನಾಯು ಸೆಳೆತದ ಸಮಸ್ಯೆಯಿಂದ ಬಳಲುತ್ತಿರುವ ಅವರು ಸಂಪೂರ್ಣ ಫಿಟ್ನೆಸ್ ಸಾಧಿಸಲು ಕನಿಷ್ಠ ಮೂರು ವಾರಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಇದೀಗ ಜಸ್ಪ್ರೀತ್ ಬುಮ್ರಾ ಅವರ ಬೆನ್ನು ನೋವಿನ ಸಮಸ್ಯೆಯನ್ನು ಗ್ರೇಡ್-1 ಎಂದು ಪರಿಗಣಿಸಲಾಗಿದ್ದು, ಹೀಗಾಗಿ ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಅವರು ಸಂಪೂರ್ಣ ಹೊರಗುಳಿಯಲಿದ್ದಾರೆ. ಈ ವಿಶ್ರಾಂತಿಯ ಬಳಿಕ ಮತ್ತೊಮ್ಮೆ ಅವರು ವೈದ್ಯಕೀಯ ಪರೀಕ್ಷೆಗೆ ಒಳಪಡಲಿದ್ದಾರೆ.
ವಿಶ್ರಾಂತಿಯ ಬಳಿಕ ಸಂಪೂರ್ಣ ಫಿಟ್ನೆಸ್ನೊಂದಿಗೆ ಕಾಣಿಸಿಕೊಂಡರೆ ಮಾತ್ರ ಬುಮ್ರಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಒಂದು ವೇಳೆ ಅವರ ಬೆನ್ನು ನೋವಿನ ಸಮಸ್ಯೆಯು ಗ್ರೇಡ್-2 ಆಗಿ ಮಾರ್ಪಟ್ಟರೆ ಕನಿಷ್ಠ 6 ವಾರಗಳ ಕಾಲ ಮೈದಾನದಿಂದ ಹೊರಗುಳಿಯಬೇಕಾಗುತ್ತದೆ.
ಹೀಗಾಗಿ ಜಸ್ಪ್ರೀತ್ ಬುಮ್ರಾ ಅವರು ಚಾಂಪಿಯನ್ಸ್ ಟ್ರೋಫಿ ಆಡಲಿದ್ದಾರೆ ಎಂಬುದನ್ನು ಈಗಲೇ ಖಚಿತಪಡಿಸಲಾಗುವುದಿಲ್ಲ. ಅತ್ತ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಫೆಬ್ರವರಿ 19 ರಿಂದ ಶುರುವಾಗಲಿದ್ದು, ಅದಕ್ಕೂ ಮುನ್ನ ಜಸ್ಪ್ರೀತ್ ಬುಮ್ರಾ ಸಂಪೂರ್ಣ ಫಿಟ್ನೆಸ್ ಸಾಧಿಸಿದರೆ ಮಾತ್ರ ಅವರನ್ನು ಆಯ್ಕೆ ಮಾಡಲು ಬಿಸಿಸಿಐ ನಿರ್ಧರಿಸಿದೆ.
ಇನ್ನು ಭಾರತ ಮತ್ತು ಇಂಗ್ಲೆಂಡ್ ನಡುವಣ 8 ಪಂದ್ಯಗಳ ಸರಣಿಯು ಜನವರಿ 22 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ 5 ಟಿ20 ಮತ್ತು 3 ಏಕದಿನ ಪಂದ್ಯಗಳನ್ನಾಡಲಿದೆ. ಈ ಪಂದ್ಯಗಳಿಗೆ ಜಸ್ಪ್ರೀತ್ ಬುಮ್ರಾ ಅಲಭ್ಯರಾಗುವುದು ಖಚಿತವಾಗಿದೆ. ಈ ಸರಣಿಯ ಮುಕ್ತಾಯದ ಬೆನ್ನಲ್ಲೇ ಬುಮ್ರಾ ಫಿಟ್ನೆಸ್ ಟೆಸ್ಟ್ಗೆ ಒಳಗಾಗಲಿದ್ದು, ಆ ಬಳಿಕವಷ್ಟೇ ಅವರ ಚಾಂಪಿಯನ್ಸ್ ಟ್ರೋಫಿ ಭವಿಷ್ಯ ನಿರ್ಧಾರವಾಗಲಿದೆ.
Published On - 1:53 pm, Tue, 7 January 25