ವಿರಾಟ್ ಕೊಹ್ಲಿಯ ವಿಶ್ವ ದಾಖಲೆಯ ಸನಿಹಕ್ಕೆ ತಲುಪಿದ ಜೋಸ್ ಬಟ್ಲರ್
Jos Buttler Records: ಟಿ20 ಕ್ರಿಕೆಟ್ನಲ್ಲಿ ಇಂಗ್ಲೆಂಡ್ನ ಬ್ಯಾಟರ್ ಜೋಸ್ ಬಟ್ಲರ್ ವಿಶೇಷ ದಾಖಲೆ ಬರೆದಿದ್ದಾರೆ. ಅದು ಸಹ ಫೋರ್ಗಳನ್ನು ಬಾರಿಸುವ ಮೂಲಕ ಎಂಬುದು ವಿಶೇಷ. ಈ ದಾಖಲೆಯೊಂದಿಗೆ ಬಟ್ಲರ್ ವಿರಾಟ್ ಕೊಹ್ಲಿಯ ಹೆಸರಿನಲ್ಲಿರುವ ವಿಶೇಷ ದಾಖಲೆಯ ಸಮೀಪಕ್ಕೆ ತಲುಪಿದ್ದಾರೆ. ಹೀಗಾಗಿ ಮುಂದಿನ ಟಿ20 ಪಂದ್ಯಗಳ ಮೂಲಕ ಬಟ್ಲರ್ ಹೊಸ ದಾಖಲೆ ಬರೆಯುವುದು ಖಚಿತ.
Updated on:Aug 28, 2025 | 8:58 AM

ಟಿ20 ಕ್ರಿಕೆಟ್ ಇತಿಹಾಸದಲ್ಲಿ ಕೇವಲ ಐವರು ಬ್ಯಾಟರ್ಗಳು ಮಾತ್ರ 1200+ ಫೋರ್ಗಳನ್ನು ಬಾರಿಸಿದ್ದಾರೆ. ಈ ಪಟ್ಟಿಯಲ್ಲಿ ಇಂಗ್ಲೆಂಡ್ನ ಅಲೆಕ್ಸ್ ಹೇಲ್ಸ್ ಅಗ್ರಸ್ಥಾನದಲ್ಲಿದ್ದರೆ, ಇದೀಗ ಅಗ್ರ ಐದರಲ್ಲಿ ಜೋಸ್ ಬಟ್ಲರ್ (Jos Buttler) ಕೂಡ ಎಂಟ್ರಿ ಕೊಟ್ಟಿದ್ದಾರೆ.

ದಿ ಹಂಡ್ರೆಡ್ ಲೀಗ್ನ 30ನೇ ಪಂದ್ಯದಲ್ಲಿ ಮ್ಯಾಂಚೆಸ್ಟರ್ ಒರಿಜಿನಲ್ಸ್ ಪರ ಕಣಕ್ಕಿಳಿದ ಜೋಸ್ ಬಟ್ಲರ್ ನಾರ್ತನ್ ಸೂಪರ್ ಚಾರ್ಜರ್ಸ್ ವಿರುದ್ಧ 37 ಎಸೆತಗಳಲ್ಲಿ 70 ರನ್ ಬಾರಿಸಿದ್ದರು. ಈ 70 ರನ್ಗಳಲ್ಲಿ ಬಟ್ಲರ್ ಬ್ಯಾಟ್ನಿಂದ ಮೂಡಿಬಂದ ಫೋರ್ಗಳ ಸಂಖ್ಯೆ ಏಳು.

ಈ ಏಳು ಫೋರ್ಗಳೊಂದಿಗೆ ಜೋಸ್ ಬಟ್ಲರ್ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಫೋರ್ ಬಾರಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದ್ದಾರೆ. ಅಲ್ಲದೆ ಟಿ20 ಇತಿಹಾಸದಲ್ಲೇ 1200+ ಫೋರ್ ಸಿಡಿಸಿದ ವಿಶ್ವದ 5ನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಇನ್ನು 5 ಫೋರ್ಗಳನ್ನು ಬಾರಿಸಿದರೆ ಜೋಸ್ ಬಟ್ಲರ್ ಈ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಬಹುದು. ಸದ್ಯ ನಾಲ್ಕನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದಾರೆ. ಟಿ20 ಕ್ರಿಕೆಟ್ನಲ್ಲಿ 397 ಇನಿಂಗ್ಸ್ ಆಡಿರುವ ಕಿಂಗ್ ಕೊಹ್ಲಿ ಈವರೆಗೆ 1210 ಫೋರ್ಗಳನ್ನು ಬಾರಿಸಿದ್ದಾರೆ.

ವಿರಾಟ್ ಕೊಹ್ಲಿಯ ಈ ದಾಖಲೆಯನ್ನು ಮುರಿಯಲು ಜೋಸ್ ಬಟ್ಲರ್ಗೆ ಕೇವಲ 5 ಫೋರ್ಗಳ ಅವಶ್ಯಕತೆಯಿದೆ. ಈವರೆಗೆ 440 ಟಿ20 ಇನಿಂಗ್ಸ್ ಆಡಿರುವ ಬಟ್ಲರ್ 1206 ಫೋರ್ಗಳನ್ನು ಬಾರಿಸಿದ್ದಾರೆ. ಹೀಗಾಗಿ ಮುಂಬರುವ ಟಿ20 ಸರಣಿ ಅಥವಾ ಲೀಗ್ ಮೂಲಕ ಜೋಸ್ ಬಟ್ಲರ್ ಕಿಂಗ್ ಕೊಹ್ಲಿಯನ್ನು ಹಿಂದಿಕ್ಕುವುದು ಖಚಿತ.

ಇನ್ನು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ಫೋರ್ಗಳನ್ನು ಬಾರಿಸಿದ ವಿಶ್ವ ದಾಖಲೆ ಇಂಗ್ಲೆಂಡ್ನ ಅಲೆಕ್ಸ್ ಹೇಲ್ಸ್ ಹೆಸರಿನಲ್ಲಿದೆ. ಈವರೆಗೆ 502 ಟಿ20 ಇನಿಂಗ್ಸ್ ಆಡಿರುವ ಅಲೆಕ್ಸ್ ಹೇಲ್ಸ್ 9539 ಎಸೆತಗಳಲ್ಲಿ 1516 ಫೋರ್ಗಳನ್ನು ಬಾರಿಸಿದ್ದಾರೆ. ಈ ಮೂಲಕ ಟ್ವೆಂಟಿ ಟ್ವೆಂಟಿ ಕ್ರಿಕೆಟ್ನಲ್ಲಿ 1500+ ಫೋರ್ ಬಾರಿಸಿದ ವಿಶ್ವದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ.
Published On - 8:57 am, Thu, 28 August 25
