ಬರೋಬ್ಬರಿ 3977 ದಿನಗಳು… ನಿಧಾನದೊಂದಿಗೆ ದಾಖಲೆ ಪಟ್ಟಿ ಸೇರಿದ ಕೆಎಲ್ ರಾಹುಲ್
India vs South Africa, 1st Test: ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಮೊದಲ ಟೆಸ್ಟ್ ಪಂದ್ಯವು ದ್ವಿತೀಯ ದಿನದಾಟಕ್ಕೆ ಕಾಲಿಟ್ಟಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು ಮೊದಲ ಇನಿಂಗ್ಸ್ನಲ್ಲಿ 159 ರನ್ಗಳಿಸಿ ಆಲೌಟ್ ಆಗಿದೆ. ಇದೀಗ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡುತ್ತಿದೆ.
Updated on: Nov 15, 2025 | 10:24 AM

ಕೆಎಲ್ ರಾಹುಲ್ (KL Rahul) ಟೆಸ್ಟ್ ಕೆರಿಯರ್ ಶುರು ಮಾಡಿ ಬರೋಬ್ಬರಿ 11 ವರ್ಷಗಳಾಗಿವೆ. ಈ ಹನ್ನೊಂದು ವರ್ಷಗಳಲ್ಲಿ ಕೆಎಲ್ಆರ್ ಆಡಿರುವುದು ಕೇವಲ 66 ಪಂದ್ಯಗಳನ್ನು ಮಾತ್ರ. ಇದೀಗ ಆರವತ್ತಾರು ಮ್ಯಾಚ್ಗಳ ಮೂಲಕ ವಿಶೇಷ ಮೈಲುಗಲ್ಲು ಮುಟ್ಟಿದ್ದಾರೆ.

ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 19 ರನ್ಗಳಿಸುವುದರೊಂದಿಗೆ ಕೆಎಲ್ ರಾಹುಲ್ ಟೆಸ್ಟ್ ಕ್ರಿಕೆಟ್ನಲ್ಲಿ 4000 ರನ್ಗಳನ್ನು ಪೂರೈಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಭಾರತದ 18ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ವಿಶೇಷ ಎಂದರೆ ಈ ಸಾಧನೆ ಮಾಡಲು ಕೆಎಲ್ ರಾಹುಲ್ ತೆಗೆದುಕೊಂಡಿರುವುದು ಬರೋಬ್ಬರಿ 3977 ದಿನಗಳು. ಅಂದರೆ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿ 3977 ದಿನಗಳ ಬಳಿಕ 4 ಸಾವಿರ ರನ್ಗಳನ್ನು ಪೂರೈಸಿದ್ದಾರೆ. ಈ ಮೂಲಕ 4000 ರನ್ಗಳಿಸಲು ದೀರ್ಘಾವಧಿ ಸಮಯ ತೆಗೆದುಕೊಂಡ ಭಾರತದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಮೊಹಿಂದರ್ ಅಮರನಾಥ್. ಟೀಮ್ ಇಂಡಿಯಾದ ಮಾಜಿ ಆಟಗಾರ ಟೆಸ್ಟ್ ಕ್ರಿಕೆಟ್ನಲ್ಲಿ 4000 ರನ್ ಪೂರೈಸಲು ಬರೋಬ್ಬರಿ 6214 ದಿನಗಳನ್ನು ತೆಗೆದುಕೊಂಡಿದ್ದರು. ಇದೀಗ 3977 ದಿನಗಳ ಮೂಲಕ ಕೆಎಲ್ ರಾಹುಲ್ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಟೀಮ್ ಇಂಡಿಯಾ ಪರ ಈವರೆಗೆ 66 ಟೆಸ್ಟ್ ಪಂದ್ಯಗಳಲ್ಲಿ 115 ಇನಿಂಗ್ಸ್ ಆಡಿರುವ ಕೆಎಲ್ ರಾಹುಲ್ 7679* ಎಸೆತಗಳನ್ನು ಎದುರಿಸಿ ಈವರೆಗೆ 4011* ರನ್ ಕಲೆಹಾಕಿದ್ದಾರೆ. ಇದರ ನಡುವೆ 11 ಭರ್ಜರಿ ಶತಕ ಹಾಗೂ 20 ಅರ್ಧಶತಕಗಳನ್ನು ಸಹ ಬಾರಿಸಿರುವುದು ವಿಶೇಷ.
