- Kannada News Photo gallery Cricket photos KL Rahul is all set to be the new vice-captain of the India ODI and T20 Squads Rohit Sharmas deputy
KL Rahul: ಭಾರತ ಏಕದಿನ ತಂಡಕ್ಕೆ ಉಪನಾಯಕ ಯಾರು ಗೊತ್ತೇ?: ಬಿಸಿಸಿಐಯಿಂದ ಮತ್ತೊಂದು ಶಾಕಿಂಗ್ ನಿರ್ಧಾರ
Rohit Sharma: ಏಕದಿನ ಕ್ರಿಕೆಟ್ನಿಂದಲೂ ವಿರಾಟ್ ಕೊಹ್ಲಿ ನಾಯಕತ್ವ ಕೈ ಜಾರಿದೆ. ಇನ್ನುಮುಂದೆ ಭಾರತ ಏಕದಿನ ಮತ್ತು ಟಿ20 ತಂಡಕ್ಕೆ ರೋಹಿತ್ ಶರ್ಮಾ ನಾಯಕ. ಇದರ ನಡುವೆ ಸೀಮಿತ ಓವರ್ಗಳ ಕ್ರಿಕೆಟ್ಗೆ ಟೀಮ್ ಇಂಡಿಯಾ ಉಪ ನಾಯಕ ಯಾರು ಎಂಬ ಪ್ರಶ್ನೆ ಹುಟ್ಟಿದೆ. ಮೂಲಗಳ ಪ್ರಕಾರ, ಕೆಎಲ್ ರಾಹುಲ್ ಅವರು ಉಪನಾಯಕನಾಗಿ ಆಯ್ಕೆ ಆಗಲಿದ್ದಾರಂತೆ.
Updated on: Dec 09, 2021 | 11:46 AM

ಕೆಲವು ತಿಂಗಳ ಹಿಂದೆಯಷ್ಟೆ ವಿರಾಟ್ ಕೊಹ್ಲಿ ಟಿ20 ನಾಯಕತ್ವ ತೊರೆದ ಕೂಡಲೇ ಏಕದಿನ ಕ್ಯಾಪ್ಟನ್ಸಿ ಪಟ್ಟವೂ ಕೈ ಜಾರಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಇದು ಈಗ ನಿಜವಾಗಿದೆ. ಟಿ-20 ಕ್ರಿಕೆಟ್ ತಂಡದ ನಾಯಕನಾಗಿರುವ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರನ್ನು ಇದೀಗ ಏಕದಿನ ತಂಡದ ನಾಯಕನನ್ನಾಗಿ ಬಿಸಿಸಿಐ ಆಯ್ಕೆ ಮಾಡಿದೆ. ಈ ಮೂಲಕ ಏಕದಿನ ಹಾಗೂ ಟಿ-20 ತಂಡಕ್ಕೆ ರೋಹಿತ್ ಅವರಿಗೆ ನಾಯಕನ ಸ್ಥಾನ ನೀಡಲಾಗಿದೆ.

ಟಿ20 ತಂಡದ ನಾಯಕತ್ವ ತ್ಯಜಿಸಿದಂತೆ ವಿರಾಟ್ ಕೊಹ್ಲಿ ಅವರು ಏಕದಿನ ಕ್ರಿಕೆಟ್ ತಂಡದ ನಾಯಕತ್ವವನ್ನು ತಾವಾಗಿಯೇ ತ್ಯಜಿಸಲಿಲ್ಲ ಎಂಬುದು ಇಲ್ಲಿ ಗಮನಿಸಬಹುದು. ಕೊಹ್ಲಿ ಅವರಿಗೆ ಸ್ವಯಂ ಪ್ರೇರಿತವಾಗಿ ಏಕದಿನ ನಾಯಕತ್ವದಿಂದ ಕೆಳಗಿಳಿಯಲು ಬಿಸಿಸಿಐ 48 ಗಂಟೆಗಳ ಕಾಲಾವಕಾಶ ನೀಡಿತ್ತಂತೆ.ಆದರೆ, ಕೊಹ್ಲಿ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಬಳಿಕ ಕೊಹ್ಲಿಯನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿ ರೋಹಿತ್ಗೆ ಜವಾಬ್ದಾರಿ ನೀಡಲಾಗಿದೆ.

ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಟೀಮ್ ಇಂಡಿಯಾ ಡಿಸೆಂಬರ್ 26ರಿಂದ ಟೆಸ್ಟ್ನಲ್ಲಿ ಭಾಗಿಯಾಗಲಿದ್ದು, ತದನಂತರ ಏಕದಿನ ಸರಣಿಯಲ್ಲಿ ಭಾಗಿಯಾಗಲಿದೆ. ಇಲ್ಲಿಂದ ರೋಹಿತ್ ಶರ್ಮಾ ನಾಯಕತ್ವದ ಹೊಸ ಯುಗ ಆರಂಭವಾಗಲಿದೆ. ಹಾಗಾದ್ರೆ, ಭಾರತ ಏಕದಿನ ತಂಡಕ್ಕೆ ಉಪ ನಾಯಕ ಯಾರು?.

ಇನ್ಸೈಡ್ ಸ್ಪೋರ್ಟ್ಸ್ ಮಾಡಿರುವ ವರದಿ ಪ್ರಕಾರ, ಭಾರತ ಏಕದಿನ ಮತ್ತು ಟಿ20 ತಂಡಕ್ಕೆ ಕೆಎಲ್ ರಾಹುಲ್ ಅವರು ಉಪನಾಯಕನಾಗಿ ಆಯ್ಕೆ ಆಗಲಿದ್ದಾರಂತೆ. ಈಗಾಗಲೇ ರಾಹುಲ್ ಕಳೆದ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಉಪನಾಯಕನಾಗಿ ಕಾರ್ಯನಿರ್ವಹಿಸಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಇನ್ನೂ ಪ್ರಕಟವಾಗಿಲ್ಲ. ಕೆಲವೇ ದಿನಗಳಲ್ಲಿ ಆಯ್ಕೆ ಸಮಿತಿ 15 ಸದಸ್ಯರ ಟೀಮ್ ಇಂಡಿಯಾ ಪ್ರಕಟ ಮಾಡಲಿದ್ದು, ಈ ಸಂದರ್ಭ ರಾಹುಲ್ ಅವರನ್ನು ಉಪನಾಯಕನಾಗಿ ಬಿಸಿಸಿಐ ಘೋಷಣೆ ಮಾಡಲಿದೆಯಂತೆ.

ಕೆಎಲ್ ರಾಹುಲ್ ವೈಟ್ ಬಾಲ್ ಕ್ರಿಕೆಟ್ನ ಮುಂದಿನ ಉಪನಾಯಕ. ಕಳೆದ ಕೆಲವು ವರ್ಷಗಳಿಂದ ರಾಹುಲ್ ಅಮೋಘ ಪ್ರದರ್ಶನ ನೀಡುತ್ತಾ ಬರುತ್ತಿದ್ದಾರೆ. ಮುಂದಿನ 6-7 ವರ್ಷಗಳಲ್ಲಿ ಅವರು ನಾಯಕನೂ ಆಗಬಹುದು. ಕೋಚ್ ದ್ರಾವಿಡ್, ನಾಯಕ ರೋಹಿತ್ ಮತ್ತು ವಿರಾಟ್ ಕೊಹ್ಲಿ ಅಡಿಯಲ್ಲಿ ರಾಹುಲ್ ಇನ್ನಷ್ಟು ಕಲಿಯಲಿದ್ದಾರೆ – ಬಿಸಿಸಿಐ ಮೂಲಗಳ ಮಾಹಿತಿ

ರಾಹುಲ್ ಕಳೆದ ಎರಡು ವರ್ಷಗಳಲ್ಲಿ ಅತ್ಯುತ್ತಮ ಸರಾಸರಿ ಹೊಂದಿದ್ದಾರೆ. 61.92 ಸರಾಸರಿಯಲ್ಲಿ ರಾಹುಲ್ ಅವರಿದ್ದು ಇಷ್ಟೊಂದು ಸರಾಸರಿ ಭಾರತದ ಯಾವ ಬ್ಯಾಟರ್ ಕೂಡ ಹೊಂದಿಲ್ಲ ಎಂಬುದು ಗಮನಾರ್ಹ. ಇದರ ನಡುವೆ ರಿಷಭ್ ಪಂತ್ ಅವರನ್ನು ಮುಂದಿನ ಟೆಸ್ಟ್ ನಾಯಕತ್ವಕ್ಕೆ ಸಜ್ಜುಗೊಳಿಸಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ.

ವಿರಾಟ್ ಕೊಹ್ಲಿ ಇದೀಗ ಟೆಸ್ಟ್ ತಂಡದ ನಾಯಕನಾಗಿ ಮಾತ್ರ ಮುಂದುವರೆಯಲಿದ್ದಾರೆ. ಇವರ ಉಪನಾಯಕನಾಗಿ ರೋಹಿತ್ ಶರ್ಮಾ ಸಾಥ್ ನೀಡಲಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ ಡಿಸೆಂಬರ್ 26ರಿಂದ ಟೆಸ್ಟ್ನಲ್ಲಿ ಭಾಗಿಯಾಗಲಿದ್ದು, ತದನಂತರ ಏಕದಿನ ಸರಣಿಯಲ್ಲಿ ಭಾಗಿಯಾಗಲಿದೆ.
