
ಹೋಬಾರ್ಟ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದ ಸಂತಸದಲ್ಲಿದ್ದ ಟೀಂ ಇಂಡಿಯಾಕ್ಕೆ ಆಘಾತ ಎದುರಾಗಿದೆ. ಮೂರನೇ ಟಿ20 ಪಂದ್ಯಕ್ಕೆ ಭಾರತ ತಂಡದಿಂದ ಹೊರಗುಳಿದಿದ್ದ ಚೈನಾಮನ್ ಬೌಲರ್ ಕುಲ್ದೀಪ್ ಯಾದವ್ ಇದೀಗ ತಂಡದಿಂದಲೇ ಹೊರಬಿದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆಡುತ್ತಿದ್ದ ಕುಲ್ದೀಪ್ ಯಾದವ್, ಹೋಬಾರ್ಟ್ ಟಿ20ಪಂದ್ಯಕ್ಕೆ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆದಿರಲಿಲ್ಲ. ಇದೀಗ ಅವರನ್ನು ಹಠಾತ್ತನೆ ತಂಡದಿಂದ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಕಾರಣವನ್ನು ನೀಡಿರುವ ಬಿಸಿಸಿಐ, ದಕ್ಷಿಣ ಆಫ್ರಿಕಾ ಎ ವಿರುದ್ಧದ ಎರಡನೇ ನಾಲ್ಕು ದಿನಗಳ ಪಂದ್ಯಕ್ಕೆ ಕುಲ್ದೀಪ್ ಅವರನ್ನು ಭಾರತ ಎ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಹೀಗಾಗಿ ಅವರು ಭಾರತಕ್ಕೆ ಮರಳುತ್ತಿದ್ದಾರೆ ಎಂದಿದೆ.

ದಕ್ಷಿಣ ಆಫ್ರಿಕಾ ಎ ವಿರುದ್ಧದ ಎರಡನೇ ನಾಲ್ಕು ದಿನಗಳ ಪಂದ್ಯ ನವೆಂಬರ್ 6 ರಿಂದ ಪ್ರಾರಂಭವಾಗಲಿದ್ದು, ಆ ಪಂದ್ಯದಲ್ಲಿ ಕುಲ್ದೀಪ್ ಭಾರತ ಎ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕುಲ್ದೀಪ್ ಯಾದವ್ ತಂಡದ ಪ್ರಮುಖ ಸ್ಪಿನ್ನರ್ ಆಗಿರುವುದರಿಂದ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿ ನವೆಂಬರ್ 14 ರಂದು ಪ್ರಾರಂಭವಾಗಲಿದ್ದು, ಆ ಸರಣಿಯಲ್ಲಿ ಕುಲ್ದೀಪ್ ತಂಡದಲ್ಲಿ ಆಡಲಿದ್ದಾರೆ. ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧದ ತವರು ಟೆಸ್ಟ್ ಸರಣಿಯಲ್ಲಿ ಕುಲ್ದೀಪ್ ಯಾದವ್ ಅಸಾಧಾರಣ ಪ್ರದರ್ಶನ ನೀಡಿದ್ದರು. 12 ವಿಕೆಟ್‌ಗಳನ್ನು ಪಡೆದು ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದರು.

ನಾಲ್ಕನೇ ಮತ್ತು ಐದನೇ ಟಿ20 ಪಂದ್ಯಗಳಿಗೆ ಭಾರತ ತಂಡ: ಸೂರ್ಯಕುಮಾರ್ ಯಾದವ್, ಅಭಿಷೇಕ್ ಶರ್ಮಾ, ಶುಭ್ಮನ್ ಗಿಲ್, ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಸಂಜು ಸ್ಯಾಮ್ಸನ್, ರಿಂಕು ಸಿಂಗ್ ಮತ್ತು ವಾಷಿಂಗ್ಟನ್ ಸುಂದರ್.