IND vs AUS: ಮತ್ತೆ ಅವಕಾಶ ವಂಚಿತರಾದ ಸಂಜು ಸ್ಯಾಮ್ಸನ್..!
Sanju Samson: ಸೌತ್ ಆಫ್ರಿಕಾ ಹಾಗೂ ಬಾಂಗ್ಲಾದೇಶ್ ವಿರುದ್ಧದ ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿ ಮಿಂಚಿದ್ದ ಸಂಜು ಸ್ಯಾಮ್ಸನ್ ಇದೀಗ ಟೀಮ್ ಇಂಡಿಯಾದಿಂದ ಹೊರಬಿದ್ದಿದ್ದಾರೆ. ಆರಂಭಿಕನಾಗಿ ಭರ್ಜರಿ ಫಾರ್ಮ್ನಲ್ಲಿದ್ದ ಸ್ಯಾಮ್ಸನ್ ಅವರನ್ನು ಶುಭ್ಮನ್ ಗಿಲ್ಗೆ ಅವಕಾಶ ಕಲ್ಪಿಸಲು ಮಧ್ಯಮ ಕ್ರಮಾಂಕದಲ್ಲಿ ಆಡಿಸಲಾಗಿತ್ತು. ಇದರೊಂದಿಗೆ ಫಾರ್ಮ್ ಕಳೆದುಕೊಂಡ ಸಂಜು ಸ್ಯಾಮ್ಸನ್ ಇದೀಗ ಆಡುವ ಬಳಗದಿಂದಲೇ ಹೊರಬಿದ್ದಿದ್ದಾರೆ.
Updated on: Nov 02, 2025 | 1:49 PM

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಿಂದ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರನ್ನು ಕೈ ಬಿಡಲಾಗಿದೆ. ಮೆಲ್ಬೋರ್ನ್ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಸ್ಯಾಮ್ಸನ್ ಕೇವಲ 2 ರನ್ಗಳಿಸಿ ಔಟಾಗಿದ್ದರು.

ಹೀಗಾಗಿ ಮೂರನೇ ಟಿ20 ಪಂದ್ಯದಿಂದ ಸಂಜು ಸ್ಯಾಮ್ಸನ್ ಅವರನ್ನು ಕೈ ಬಿಡಲಾಗಿದೆ. ವಿಶೇಷ ಎಂದರೆ ಕೆಲ ತಿಂಗಳುಗಳ ಹಿಂದೆಯಷ್ಟೇ ಸ್ಯಾಮ್ಸನ್ ಟೀಮ್ ಇಂಡಿಯಾ ಪರ ಆರಂಭಿಕನಾಗಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅದರಲ್ಲೂ ಸೌತ್ ಆಫ್ರಿಕಾ ಹಾಗೂ ಬಾಂಗ್ಲಾದೇಶ್ ವಿರುದ್ಧದ ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದ್ದರು.

ಆದರೆ ಶುಭ್ಮನ್ ಗಿಲ್ ಎಂಟ್ರಿಯೊಂದಿಗೆ ಸ್ಯಾಮ್ಸನ್ ತನ್ನ ಆರಂಭಿಕ ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು. ಇತ್ತ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದಂತೆ ಫಾರ್ಮ್ ಕಳೆದುಕೊಂಡ ಸ್ಯಾಮ್ಸನ್ ಇದೀಗ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ನಿಂದಲೇ ಹೊರಬಿದ್ದಿದ್ದಾರೆ.

ಸಂಜು ಸ್ಯಾಮ್ಸನ್ ಬದಲಿಗೆ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಜಿತೇಶ್ ಶರ್ಮಾ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಣಕ್ಕಿಳಿದಿದ್ದಾರೆ. ಆರ್ಸಿಬಿ ಪರ ಭರ್ಜರಿ ಪ್ರದರ್ಶನ ನೀಡಿದ್ದ ಜಿತೇಶ್ ಶರ್ಮಾಗೆ ಇದು ಚೊಚ್ಚಲ ಆಸ್ಟ್ರೇಲಿಯಾ ಸರಣಿ. ಇದೀಗ ಚೊಚ್ಚಲ ಸರಣಿಯಲ್ಲೇ ಆಡುವ ಬಳಗದಲ್ಲಿ ಅವಕಾಶ ಪಡೆಯುವಲ್ಲಿ ಯುವ ವಿಕೆಟ್ ಕೀಪರ್ ಯಶಸ್ವಿಯಾಗಿದ್ದಾರೆ.

ಇನ್ನು ಮೂರನೇ ಟಿ20 ಪಂದ್ಯಕ್ಕಾಗಿ ಟೀಮ್ ಇಂಡಿಯಾದಲ್ಲಿ ಮೂರು ಬದಲಾವಣೆ ಮಾಡಲಾಗಿದ್ದು, ಅದರಂತೆ ಕುಲ್ದೀಪ್ ಯಾದವ್ ಬದಲಿಗೆ ವಾಷಿಂಗ್ಟನ್ ಸುಂದರ್ ಕಣಕ್ಕಿಳಿದಿದ್ದಾರೆ. ಇನ್ನು ಹರ್ಷಿತ್ ರಾಣಾ ಸ್ಥಾನದಲ್ಲಿ ಎಡಗೈ ವೇಗಿ ಅರ್ಷದೀಪ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಸಂಜು ಸ್ಯಾಮ್ಸನ್ ಬದಲಿಗೆ ವಿಕೆಟ್ ಕೀಪರ್ ಬ್ಯಾಟರ್ ಆಗಿ ಜಿತೇಶ್ ಶರ್ಮಾ ಕಣಕ್ಕಿಳಿದಿದ್ದಾರೆ.

ಭಾರತ ಪ್ಲೇಯಿಂಗ್ 11: ಶುಭ್ಮನ್ ಗಿಲ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್) ಶಿವಂ ದುಬೆ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ವಾಷಿಂಗ್ಟನ್ ಸುಂದರ್. (ಸಂಜು ಸ್ಯಾಮ್ಸನ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ ಹೊರಕ್ಕೆ).
