ಇಂಗ್ಲೆಂಡ್‌ನ ಸ್ಫೋಟಕ ಆಲ್‌ರೌಂಡರ್ ಲಿಯಾಮ್ ಲಿವಿಂಗ್ಸ್ಟೋನ್ ಆರ್ಸಿಬಿಯ ಮೊದಲ ಖರೀದಿಯಾಗಿ ರೆಡ್ ಆರ್ಮಿಯನ್ನು ಕೂಡಿಕೊಂಡಿದ್ದಾರೆ. ತಂಡದಲ್ಲಿ ಕೇವಲ ಮೂವರು ಆಟಗಾರರನ್ನು ಉಳಿಸಿಕೊಂಡಿದ್ದ ಆರ್ಸಿಬಿಗೆ ಒಬ್ಬ ಸ್ಪಿನ್ ಆಲ್ರೌಂಡರ್ನ ಅವಶ್ಯಕತೆ ಇತ್ತು. ಅದರಂತೆ ಆರ್ಸಿಬಿ ಲಿಯಾಮ್ ಲಿವಿಂಗ್ಸ್ಟೋನ್ರನ್ನು ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಲಿವಿಂಗ್ಸ್ಟೋನ್ರನ್ನು ಖರೀದಿಸಲು ಆರಂಭದಲ್ಲೇ ಆರ್ಸಿಬಿ ಕಣಕ್ಕಿಳಿಯಿತು. ಇತ್ತ ಆರ್ಸಿಬಿ ಟಕ್ಕರ್ ನೀಡಲು ಹೈದರಾಬಾದ್ ಎದುರಾಯಿತು. ಅಂತಿಮವಾಗಿ ಹೈದರಾಬಾದ್ 4 ಕೋಟಿಗೆ ತನ್ನ ಬಿಡ್ ನಿಲ್ಲಿಸಿತು. ಈ ವೇಳೆ ಅಖಾಡಕ್ಕಿಳಿದ ಚೆನ್ನೈ ಸೂಪರ್ಕಿಂಗ್ಸ್ ಫ್ರಾಂಚೈಸಿ 7 ಕೋಟಿ ಬಿಡ್ ಮಾಡಿತು. ಆದರೆ ಅಂತಿಮವಾಗಿ ಆರ್ಸಿಬಿ 8.75 ಕೋಟಿ ನೀಡಿ ಲಿವಿಂಗ್ಸ್ಟೋನ್ರನ್ನು ಖರೀದಿ ಮಾಡಿದೆ.
2022 ರ ಮೆಗಾ ಹರಾಜಿನಲ್ಲಿ 11.50 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ ತಂಡವನ್ನು ಸೇರಿಕೊಂಡಿದ್ದ ಲಿವಿಂಗ್ಸ್ಟೋನ್, ಕಳೆದ 3 ವರ್ಷಗಳಿಂದ ಈ ತಂಡದ ಭಾಗವಾಗಿದ್ದರು. ಆದರೆ ಕಳೆದ 2 ಸೀಸನ್‌ಗಳಲ್ಲಿ ಅವರ ಪ್ರದರ್ಶನ ವಿಶೇಷವೇನು ಆಗಿರಲಿಲ್ಲ. ಇದರಿಂದಾಗಿ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿತ್ತು. ಪಂಜಾಬ್‌ಗಿಂತ ಮೊದಲು ಲಿಯಾಮ್ ಲಿವಿಂಗ್‌ಸ್ಟನ್ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿದ್ದರು.
ಐಪಿಎಲ್‌ನಲ್ಲಿ ಇದುವರೆಗೆ ಎರಡು ತಂಡಗಳ ಪರ ಆಡಿರುವ ಲಿವಿಂಗ್ಸ್ಟೋನ್, ಕಳೆದ ಬಾರಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡಿದ್ದರು. ಇದುವರೆಗೆ ಐಪಿಎಲ್‌ನಲ್ಲಿ 39 ಪಂದ್ಯಗಳನ್ನಾಡಿರುವ ಲಿವಿಂಗ್ಸ್ಟೋನ್ 28.45 ರ ಸರಾಸರಿಯಲ್ಲಿ 939 ರನ್ ಕಲೆಹಾಕಿದ್ದಾರೆ. ಇದರಲ್ಲಿ 6 ಅರ್ಧಶತಕಗಳು ಸೇರಿವೆ. ಇದರ ಜೊತೆಗೆ ಬೌಲಿಂಗ್ನಲ್ಲಿ 11 ವಿಕೆಟ್ ಕೂಡ ಉರುಳಿಸಿದ್ದಾರೆ.
ಇನ್ನು ಇಂಗ್ಲೆಂಡ್ ಪರ 55 ಪಂದ್ಯಗಳನ್ನಾಡಿರುವ ಲಿವಿಂಗ್ಸ್ಟೋನ್ 151.11 ಸ್ಟ್ರೈಕ್ ರೇಟ್ನಲ್ಲಿ 881 ರನ್ ಕಲೆಹಾಕಿದ್ದಾರೆ. ಇದರಲ್ಲಿ ಅವರ ಅತ್ಯಧಿಕ ಸ್ಕೋರ್ 103 ರನ್ಗಳಾಗಿದೆ. ಇದರ ಜೊತೆಗೆ ಅವರು 1 ಶತಕ ಹಾಗೂ 2 ಅರ್ಧಶತಕಗಳನ್ನು ಕಲೆಹಾಕಿದ್ದಾರೆ. ಬೌಲಿಂಗ್ನಲ್ಲೂ ಕಮಾಲ್ ಮಾಡಿರುವ ಲಿವಿಂಗ್ಸ್ಟೋನ್, 32 ವಿಕೆಟ್ ಉರುಳಿಸಿದ್ದಾರೆ.
Published On - 5:22 pm, Sun, 24 November 24