ICC Rankings: ಮೂರು ಸ್ವರೂಪಗಳಲ್ಲೂ ಅಗ್ರಸ್ಥಾನ ಅಲಂಕರಿಸಿದ 5 ಆಟಗಾರರು ಇವರೇ..!
ICC Rankings: ಕ್ರಿಕೆಟ್ ಇತಿಹಾಸದಲ್ಲೇ ಮೂರು ಸ್ವರೂಪಗಳ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ್ದು ಕೇವಲ 5 ಆಟಗಾರರು ಮಾತ್ರ. ಇದೀಗ ಈ ಪಟ್ಟಿಯಲ್ಲಿ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ನಾಲ್ವರು ಆಟಗಾರರು ಈ ಸಾಧನೆ ಮಾಡಿದ್ದರು. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ
Updated on: Feb 08, 2024 | 10:08 AM

ಐಸಿಸಿ ಪ್ರಕಟಿಸಿರುವ ನೂತನ ಟೆಸ್ಟ್ ಬೌಲರ್ಗಳ ಶ್ರೇಯಾಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಅಗ್ರಸ್ಥಾನ ಅಲಂಕರಿಸಿದ್ದಾರೆ. ಇದರೊಂದಿಗೆ ಟೆಸ್ಟ್ ಕ್ರಿಕೆಟ್ ರ್ಯಾಂಕಿಂಗ್ನಲ್ಲಿ ಮೊದಲ ಸ್ಥಾನಕ್ಕೇರಿದ ಭಾರತದ ಮೊದಲ ವೇಗಿ ಎಂಬ ಹೆಗ್ಗಳಿಕೆಗೆ ಬುಮ್ರಾ ಪಾತ್ರರಾಗಿದ್ದಾರೆ.

ಹಾಗೆಯೇ ಮೂರು ಸ್ವರೂಪಗಳ ಕ್ರಿಕೆಟ್ ಶ್ರೇಯಾಂಕದಲ್ಲೂ ಅಗ್ರಸ್ಥಾನ ಅಲಂಕರಿಸಿದ ವಿಶ್ವದ ಮೊದಲ ಬೌಲರ್ ಎಂಬ ವಿಶ್ವ ದಾಖಲೆ ಕೂಡ ಜಸ್ಪ್ರೀತ್ ಬುಮ್ರಾ ಪಾಲಾಗಿದೆ. ಇದರ ಜೊತೆಗೆ ಈ ಸಾಧನೆ ಮಾಡಿದ ವಿಶ್ವದ 5ನೇ ಆಟಗಾರ ಎನಿಸಿಕೊಂಡಿದ್ದಾರೆ. ಹಾಗಿದ್ರೆ ಬುಮ್ರಾಗಿಂತಲೂ ಮೊದಲು ಟಿ20, ಟೆಸ್ಟ್ ಮತ್ತು ಏಕದಿನ ಮಾದರಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ ಆಟಗಾರರು ಯಾರೆಲ್ಲಾ ಎಂದು ನೋಡೋಣ...

1- ರಿಕಿ ಪಾಂಟಿಂಗ್: ಕ್ರಿಕೆಟ್ ಇತಿಹಾಸದಲ್ಲೇ ಸ್ವರೂಪಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ ಮೊದಲ ಆಟಗಾರ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್. 2005 ರಲ್ಲಿ ಪಂಟರ್ ಖ್ಯಾತಿಯ ಪಾಂಟಿಂಗ್ ಈ ಸಾಧನೆ ಮಾಡಿದ್ದಾರೆ.

2- ಮ್ಯಾಥ್ಯೂ ಹೇಡನ್: ಟಿ20, ಟೆಸ್ಟ್, ಏಕದಿನ ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ 2ನೇ ಆಟಗಾರ ಮ್ಯಾಥ್ಯೂ ಹೇಡನ್. ಆಸ್ಟ್ರೇಲಿಯಾ ಪರ ಆರಂಭಿಕನಾಗಿ ಮಿಂಚಿದ್ದ ಹೇಡನ್ 2007 ರಲ್ಲಿ ಈ ಮೂರು ಸ್ವರೂಪಗಳ ಕ್ರಿಕೆಟ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ಅಲಂಕರಿಸಿದ್ದರು.

3- ಶಕೀಬ್ ಅಲ್ ಹಸನ್: ಬಾಂಗ್ಲಾದೇಶ್ ತಂಡದ ಆಲ್ರೌಂಡರ್ ಶಕೀಬ್ ಅಲ್ ಹಸನ್ ಕೂಡ ಮೂರು ಮಾದರಿ ಶ್ರೇಯಾಂಕದಲ್ಲೂ ಅಗ್ರಸ್ಥಾನ ಅಲಂಕರಿಸಿದ ಸಾಧಕ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಶಕೀಬ್ 2015 ರಲ್ಲಿ ಈ ಸಾಧನೆ ಮಾಡಿದ್ದಾರೆ.

4- ವಿರಾಟ್ ಕೊಹ್ಲಿ: ಮೂರು ಮಾದರಿಯ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ ಮೊದಲ ಭಾರತೀಯ ಎಂಬ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕಿಂಗ್ ಕೊಹ್ಲಿ 2012 ರಲ್ಲಿ ಏಕದಿನ ಬ್ಯಾಟರ್ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದರೆ, 2014 ಮತ್ತು 2016 ರಲ್ಲಿ ನಂಬರ್ 1 ಟಿ20 ಬ್ಯಾಟ್ಸ್ಮನ್ ಆಗಿ ಹೊರಹೊಮ್ಮಿದ್ದರು. ಹಾಗೆಯೇ 2018 ರಲ್ಲಿ ಟೆಸ್ಟ್ ಬ್ಯಾಟರ್ಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನ ಅಲಂಕರಿಸಿದ್ದರು. ಈ ಮೂಲಕ ಮೂರು ಮಾದರಿಯಲ್ಲಿ ಈ ಸಾಧನೆ ಮಾಡಿದ ವಿಶ್ವದ 4ನೇ ಆಟಗಾರ ಎನಿಸಿಕೊಂಡಿದ್ದಾರೆ.

5- ಜಸ್ಪ್ರೀತ್ ಬುಮ್ರಾ: ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ 2017 ಮತ್ತು 2018 ರಲ್ಲಿ ಏಕದಿನ ಮತ್ತು ಟಿ20 ಕ್ರಿಕೆಟ್ ಬೌಲರ್ಗಳ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ಅಲಂಕರಿಸಿದ್ದರು. ಇದೀಗ ಟೆಸ್ಟ್ ಕ್ರಿಕೆಟ್ನಲ್ಲೂ ನಂಬರ್ 1 ಬೌಲರ್ ಆಗಿ ಕಾಣಿಸಿಕೊಂಡಿದ್ದಾರೆ. ಮೂಲಕ ಮೂರು ಸ್ವರೂಪಗಳಲ್ಲೂ ಅಗ್ರಸ್ಥಾನಕ್ಕೇರಿದ ವಿಶ್ವದ ಮೊದಲ ಬೌಲರ್ ಎಂಬ ವಿಶ್ವದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
