ನಾಯಕತ್ವದಿಂದ ಕಮಿನ್ಸ್ ವಜಾ: ಆಸ್ಟ್ರೇಲಿಯಾ ಟಿ20 ತಂಡಕ್ಕೆ ಹೊಸ ಕ್ಯಾಪ್ಟನ್
Mitchell Marsh: ಮುಂಬರುವ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಯುವ ಆಲ್ರೌಂಡರ್ ಮಿಚೆಲ್ ಮಾರ್ಷ್ ಮುನ್ನಡೆಸುವುದು ಬಹುತೇಕ ಖಚಿತವಾಗಿದೆ. ಈ ಹಿಂದಿನ ನಾಯಕ ಪ್ಯಾಟ್ ಕಮಿನ್ಸ್ ತಂಡವನ್ನು ನಾಯಕತ್ವದಿಂದ ಕೆಳಗಿಸಲಾಗುತ್ತಿದ್ದು, ಅವರ ಬದಲಿಗೆ ಮಾರ್ಚ್ಗೆ ಕಪ್ತಾನಗಿರಿ ನೀಡಲು ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಮುಂದಾಗಿದೆ.
Updated on: Mar 12, 2024 | 1:08 PM

ಜೂನ್ 1 ರಿಂದ ಶುರುವಾಗಲಿರುವ ಟಿ20 ವಿಶ್ವಕಪ್ಗಾಗಿ (T20 World Cup 2024) ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಹೊಸ ನಾಯಕನ್ನು ಆಯ್ಕೆ ಮಾಡಲಿದೆ. ಈ ಹಿಂದೆ ಕ್ಯಾಪ್ಟನ್ ಸ್ಥಾನದಲ್ಲಿದ್ದ ಪ್ಯಾಟ್ ಕಮಿನ್ಸ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗುತ್ತಿದ್ದು, ಅವರ ಬದಲಿಗೆ ಮಿಚೆಲ್ ಮಾರ್ಷ್ಗೆ ನಾಯಕನ ಪಟ್ಟ ನೀಡಲು ನಿರ್ಧರಿಸಿದೆ.

ಈ ಸುದ್ದಿಯನ್ನು ಪುಷ್ಠೀಕರಿಸುವಂತೆ ಇದೀಗ ಆಸ್ಟ್ರೇಲಿಯಾ ತಂಡದ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಮಾತನಾಡಿದ್ದು, ಮುಂಬರುವ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಿಚೆಲ್ ಮಾರ್ಷ್ ಮುನ್ನಡೆಸುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ. ಇದರೊಂದಿಗೆ ಆಸ್ಟ್ರೇಲಿಯಾ ಟಿ20 ತಂಡದ ನಾಯಕ ಬದಲಾಗುವುದು ಬಹುತೇಕ ಖಚಿತವಾದಂತಾಗಿದೆ.

ಈ ಹಿಂದೆ ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡವು ಏಕದಿನ ವಿಶ್ವಕಪ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅನ್ನು ಗೆದ್ದುಕೊಂಡಿತ್ತು. ಇದಾಗ್ಯೂ ಟಿ20 ತಂಡದ ನಾಯಕತ್ವದಿಂದ ಕಮಿನ್ಸ್ ಅವರನ್ನು ಕೈ ಬಿಡಲಾಗಿರುವುದು ಅಚ್ಚರಿಗೆ ಕಾರಣವಾಗಿದೆ.

2023ರ ಏಕದಿನ ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಪ್ಯಾಟ್ ಕಮಿನ್ಸ್ ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಮಿಚೆಲ್ ಮಾರ್ಷ್ ಅದ್ಭುತ ಯಶಸ್ಸು ಸಾಧಿಸಿದ್ದಾರೆ. ಮಾರ್ಷ್ ಮುಂದಾಳತ್ವದಲ್ಲಿ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿದ್ದ ಆಸ್ಟ್ರೇಲಿಯಾ, ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.

ಈ ಎರಡು ಸರಣಿ ಜಯಗಳೊಂದಿಗೆ ಮಿಚೆಲ್ ಮಾರ್ಷ್ ತಮ್ಮ ನಾಯಕತ್ವದ ಗುಣಗಳನ್ನು ತೆರೆದಿಟ್ಟಿದ್ದಾರೆ. ಈ ಮೂಲಕ ಮುಂಬರುವ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲು ತುದಿಗಾಲಲ್ಲಿ ನಿಂತಿದ್ದಾರೆ. ಹೀಗಾಗಿ ಜೂನ್ 1 ರಿಂದ ಆರಂಭವಾಗಲಿರುವ ಚುಟುಕು ಕ್ರಿಕೆಟ್ ಕದನದಲ್ಲಿ ಆಸೀಸ್ ಪಡೆಯ ನಾಯಕನಾಗಿ ಮಿಚೆಲ್ ಮಾರ್ಷ್ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.



















