- Kannada News Photo gallery Cricket photos Mohammad Amir Announces Retirement From International Cricket
ಮೊಹಮ್ಮದ್ ಅಮೀರ್ ವಿದಾಯ, ಮತ್ತೆ ವಿದಾಯ.. ಮತ್ತೊಮ್ಮೆ ವಿದಾಯ..!
Mohammad Amir: 32 ವರ್ಷದ ಮೊಹಮ್ಮದ್ ಅಮೀರ್ ಪಾಕಿಸ್ತಾನ್ ಪರ 36 ಟೆಸ್ಟ್, 61 ಏಕದಿನ ಮತ್ತು 62 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಟೆಸ್ಟ್ನಲ್ಲಿ 119 ವಿಕೆಟ್ ಪಡೆದರೆ, ಏಕದಿನದಲ್ಲಿ 81 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ ಟಿ20 ಕ್ರಿಕೆಟ್ನಲ್ಲಿ 71 ವಿಕೆಟ್ ಪಡೆದಿದ್ದಾರೆ. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಅಮೀರ್ ಕೇವಲ ಫ್ರಾಂಚೈಸಿ ಲೀಗ್ನತ್ತ ಗಮನ ಕೇಂದ್ರೀಕರಿಸಲು ನಿರ್ಧರಿಸಿದ್ದಾರೆ.
Updated on: Dec 14, 2024 | 11:53 AM

ಪಾಕಿಸ್ತಾನ್ ತಂಡದ ಎಡಗೈ ವೇಗಿ ಮೊಹಮ್ಮದ್ ಅಮೀರ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಆದರೆ ಅವರು ವಿದಾಯ ಹೇಳುತ್ತಿರುವುದು ಇದೇ ಮೊದಲ ಬಾರಿಯಲ್ಲ ಎಂಬುದು ವಿಶೇಷ. 2009 ರಲ್ಲಿ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದ ಅಮೀರ್ 2015 ರಲ್ಲಿ ವೃತ್ತಿಜೀವನ ಅಂತ್ಯಗೊಳಿಸಿದ್ದರು.

ಸ್ಪಾಟ್ ಫಿಕ್ಸಿಂಗ್ನಲ್ಲಿ ಸಿಕ್ಕಿ ಬಿದ್ದಿದ್ದ ಪಾಕ್ ವೇಗಿಯನ್ನು 5 ವರ್ಷಗಳ ಕಾಲ ಬ್ಯಾನ್ ಮಾಡಲಾಗಿತ್ತು. ಹೀಗಾಗಿ 2010 ರಿಂದ 2015 ರವರೆಗೆ ಅವರು ಯಾವುದೇ ಪಂದ್ಯವಾಡಿರಲಿಲ್ಲ. ಈ ನಿಷೇಧದ ನಡುವೆ ಕ್ರಿಕೆಟ್ ಕೆರಿಯರ್ ಅನ್ನು ಅಂತ್ಯಗೊಳಿಸುವುದಾಗಿ ಅಮೀರ್ ತಿಳಿಸಿದ್ದರು.

ಆದರೆ 2016 ರಲ್ಲಿ ಮತ್ತೆ ಕಣಕ್ಕಿಳಿಯಲು ನಿರ್ಧರಿಸಿದರು. ಅದರಂತೆ ಪಾಕಿಸ್ತಾನ್ ತಂಡಕ್ಕೆ ಕಂಬ್ಯಾಕ್ ಮಾಡಿದ ಅಮೀರ್ 2017ರ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು. ಇದಾದ ಬಳಿಕ ಎಡಗೈ ವೇಗಿ ಹಿಂತಿರುಗಿ ನೋಡಿಲ್ಲ ಎನ್ನಬಹುದು. ಸತತ ನಾಲ್ಕು ವರ್ಷಗಳ ಕಾಲ ಪಾಕ್ ತಂಡದ ಪ್ರಮುಖ ವೇಗಿಯಾಗಿ ಕಾಣಿಸಿಕೊಂಡರು.

ಆದರೆ 2021 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದರು. ಇನ್ಮುಂದೆ ಪಾಕಿಸ್ತಾನ್ ಪರ ಆಡುವುದಿಲ್ಲ ಎಂದು ಬಹಿರಂಗವಾಗಿಯೇ ತಿಳಿಸಿದ್ದರು. ಅಲ್ಲಿಗೆ ಮೊಹಮ್ಮದ್ ಅಮೀರ್ ಕೆರಿಯರ್ ಖತಂ ಎಂದೇ ಎಲ್ಲರೂ ಭಾವಿಸಿದ್ದರು.

ಈ ವಿದಾಯದ ಎರಡು ವರ್ಷಗಳ ಬಳಿಕ ಮತ್ತೆ ಮೊಹಮ್ಮದ್ ಅಮೀರ್ ತಮ್ಮ ನಿರ್ಧಾರ ಬದಲಿಸಿದರು. ಅಲ್ಲದೆ ನಿವೃತ್ತಿ ಹಿಂಪಡೆದು 2024ರ ಟಿ20 ವಿಶ್ವಕಪ್ನಲ್ಲಿ ಪಾಕ್ ತಂಡವನ್ನು ಪ್ರತಿನಿಧಿಸಿದರು. ಇದಾದ ಬಳಿಕ ಪಾಕಿಸ್ತಾನ್ ತಂಡದಿಂದ ಹೊರಬಿದ್ದ ಅಮೀರ್ ಇದೀಗ ಮತ್ತೊಮ್ಮೆ ನಿವೃತ್ತಿ ಘೋಷಿಸಿದ್ದಾರೆ. ಅಲ್ಲದೆ ಇನ್ಮುಂದೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
