
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ, ಇನ್ನಿಂಗ್ಸ್ ಮತ್ತು 140 ರನ್‌ಗಳ ಗೆಲುವು ಸಾಧಿಸಿದ ನಂತರ, ಭಾರತೀಯ ಆಟಗಾರರು ಐಸಿಸಿ ಶ್ರೇಯಾಂಕದಲ್ಲಿ ಭರ್ಜರಿ ಮುಂಬಡ್ತಿ ಪಡೆದಿದ್ದಾರೆ. ಅದರಲ್ಲೂ ಮೊದಲ ಟೆಸ್ಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಮತ್ತು ವಿಶೇಷವಾಗಿ ಆಲ್‌ರೌಂಡರ್ ರವೀಂದ್ರ ಜಡೇಜಾ ಶ್ರೇಯಾಂಕದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಏಳು ವಿಕೆಟ್ ಪಡೆದಿದ್ದ ಮೊಹಮ್ಮದ್ ಸಿರಾಜ್ ಐಸಿಸಿ ಶ್ರೇಯಾಂಕದಲ್ಲಿ ಮೂವರು ಬೌಲರ್‌ಗಳನ್ನು ಹಿಂದಿಕ್ಕಿ 12 ನೇ ಸ್ಥಾನಕ್ಕೆ ತಲುಪಿದ್ದಾರೆ. ಸಿರಾಜ್ ತಮ್ಮ ವೃತ್ತಿಜೀವನದ ಅತ್ಯುತ್ತಮ ರೇಟಿಂಗ್ ಪಾಯಿಂಟ್ (718) ಕಲೆಹಾಕಿದ್ದು, ಮುಂದಿನ ಟೆಸ್ಟ್‌ನಲ್ಲಿ ಇದೇ ಪ್ರದರ್ಶನವನ್ನು ಮುಂದುವರೆಸಿದರೆ, ರ್ಯಾಂಕಿಂಗ್ನಲ್ಲಿ ಮತ್ತಷ್ಟು ಏರಿಕೆ ಕಾಣಲಿದ್ದಾರೆ.

ಅಹಮದಾಬಾದ್‌ನಲ್ಲಿ ನಡೆದ ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಸಿರಾಜ್ 14 ಓವರ್‌ಗಳಲ್ಲಿ ಕೇವಲ 40 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಸಿರಾಜ್ 11 ಓವರ್‌ಗಳಲ್ಲಿ 31 ರನ್‌ಗಳನ್ನು ಬಿಟ್ಟುಕೊಟ್ಟರು, ಆದರೆ ಅವರಿಗೆ ಯಾವುದೇ ವಿಕೆಟ್ ಸಿಗಲಿಲ್ಲ. ಇಲ್ಲಿಯೂ ಅವರು ಎರಡು ಅಥವಾ ಮೂರು ವಿಕೆಟ್‌ಗಳನ್ನು ಪಡೆದಿದ್ದರೆ, ಸಿರಾಜ್ ಟಾಪ್ 10 ರಲ್ಲಿ ಸ್ಥಾನ ಪಡೆಯುತ್ತಿದ್ದರು.

ಇತ್ತ ರವೀಂದ್ರ ಜಡೇಜಾ ಕೂಡ ಮೊದಲ ಟೆಸ್ಟ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ್ದರು. ಈ ಮೂಲಕ ವಿಶ್ವದ ನಂ. 1 ಟೆಸ್ಟ್ ಆಲ್‌ರೌಂಡರ್ ಎನಿಸಿಕೊಂಡಿರುವ ಜಡೇಜಾ, ಬ್ಯಾಟ್ಸ್‌ಮನ್‌ಗಳ ಟೆಸ್ಟ್ ಶ್ರೇಯಾಂಕದಲ್ಲಿ 25 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಜಡೇಜಾ ಪ್ರಸ್ತುತ 35 ನೇ ಸ್ಥಾನದಲ್ಲಿರುವ ಕೆಎಲ್ ರಾಹುಲ್ ಮತ್ತು ಬೆನ್ ಸ್ಟೋಕ್ಸ್‌ರಂತಹ ಬ್ಯಾಟ್ಸ್‌ಮನ್‌ಗಳನ್ನು ಹಿಂದಿಕ್ಕಿದ್ದಾರೆ.

ಉಳಿದಂತೆ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್ ಒನ್ ಬೌಲರ್ ಆಗಿ ಮುದುವರೆದಿದ್ದಾರೆ. ಇತ್ತೀಚೆಗಷ್ಟೇ 908 ರೇಟಿಂಗ್ ಪಾಯಿಂಟ್ ಪಡೆದಿದ್ದ ಬುಮ್ರಾ, ಈ ವಿಚಾರದಲ್ಲಿ ಕುಸಿತ ಕಂಡಿದ್ದು, 885 ರೇಟಿಂಗ್ ಪಾಯಿಂಟ್ ಪಡೆದುಕೊಂಡಿದ್ದಾರೆ. ಹೀಗಾಗಿ ಅವರ ನಂಬರ್ ಒನ್ ಸ್ಥಾನಕ್ಕೆ ಯಾವುದೇ ಅಪಾಯವಿಲ್ಲ.