Mohammed Siraj: 6 ವಿಕೆಟ್ 10 ದಾಖಲೆಗಳು: ಇದು ಮಿಯಾನ್ ಮ್ಯಾಜಿಕ್
TV9 Web | Updated By: ಝಾಹಿರ್ ಯೂಸುಫ್
Updated on:
Sep 17, 2023 | 10:57 PM
Mohammed Siraj Records: 4ನೇ ಓವರ್ನಿಂದ ವಿಕೆಟ್ ಬೇಟೆ ಶುರು ಮಾಡಿದ ಸಿರಾಜ್ ಕೇವಲ 16 ಎಸೆತಗಳಲ್ಲಿ 5 ವಿಕೆಟ್ ಉರುಳಿಸಿದರು. ಅಷ್ಟೇ ಅಲ್ಲದೆ ಅಂತಿಮವಾಗಿ 7 ಓವರ್ಗಳಲ್ಲಿ 21 ರನ್ ನೀಡಿ 6 ವಿಕೆಟ್ ಕಬಳಿಸಿದರು. ಇದರೊಂದಿಗೆ ಹಲವು ದಾಖಲೆ ಮಿಯಾನ್ ಪಾಲಾಯಿತು. ಆ ದಾಖಲೆಗಳ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ...
1 / 13
ಏಷ್ಯಾಕಪ್ನ ಫೈನಲ್ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಮೂಲಕ ಮೊಹಮ್ಮದ್ ಸಿರಾಜ್ ಹಲವು ದಾಖಲೆಗಳನ್ನು ಬರೆದಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡವು ಸಿರಾಜ್ ಅವರ ಕರಾರುವಾಕ್ ದಾಳಿಗೆ ಅಕ್ಷರಶಃ ತತ್ತರಿಸಿತು.
2 / 13
4ನೇ ಓವರ್ನಿಂದ ವಿಕೆಟ್ ಬೇಟೆ ಶುರು ಮಾಡಿದ ಸಿರಾಜ್ ಕೇವಲ 16 ಎಸೆತಗಳಲ್ಲಿ 5 ವಿಕೆಟ್ ಉರುಳಿಸಿದರು. ಅಷ್ಟೇ ಅಲ್ಲದೆ ಅಂತಿಮವಾಗಿ 7 ಓವರ್ಗಳಲ್ಲಿ 21 ರನ್ ನೀಡಿ 6 ವಿಕೆಟ್ ಕಬಳಿಸಿದರು. ಇದರೊಂದಿಗೆ ಹಲವು ದಾಖಲೆ ಮಿಯಾನ್ ಪಾಲಾಯಿತು. ಆ ದಾಖಲೆಗಳ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ...
3 / 13
1- ಅತೀ ವೇಗದದಲ್ಲಿ 5 ವಿಕೆಟ್: ಅತ್ಯಂತ ವೇಗವಾಗಿ 5 ವಿಕೆಟ್ ಕಬಳಿಸಿದ ಭಾರತೀಯ ಬೌಲರ್ ಎಂಬ ದಾಖಲೆ ಈ ಪಂದ್ಯದೊಂದಿಗೆ ಸಿರಾಜ್ ಪಾಲಾಗಿದೆ. ಕೇವಲ 16 ಎಸೆತಗಳಲ್ಲಿ 5 ವಿಕೆಟ್ ಉರುಳಿಸಿ ಸಿರಾಜ್ ಈ ಸಾಧನೆ ಮಾಡಿದ್ದಾರೆ.
4 / 13
2- ಒಂದೇ ಓವರ್ನಲ್ಲಿ 4 ವಿಕೆಟ್: ಟೀಮ್ ಇಂಡಿಯಾ ಪರ ಒಂದೇ ಓವರ್ನಲ್ಲಿ 4 ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. ಸಿರಾಜ್ ಫೈನಲ್ ಪಂದ್ಯದ 4ನೇ ಓವರ್ನಲ್ಲಿ ಪಾತುಮ್ ನಿಸ್ಸಂಕಾ, ಚರಿತ್ ಅಸಲಂಕಾ, ಸದೀರ ಸಮರವಿಕ್ರಮ ಮತ್ತು ಧನಂಜಯ ಡಿಸಿಲ್ವಾ ಅವರನ್ನು ಔಟ್ ಮಾಡಿ ಈ ದಾಖಲೆ ಬರೆದಿದ್ದಾರೆ.
5 / 13
3- ಅತ್ಯುತ್ತಮ ಬೌಲಿಂಗ್ ಪ್ರದರ್ಶನ: ಏಕದಿನ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ 4ನೇ ಬೌಲರ್ ಎಂಬ ಹಿರಿಮೆಗೆ ಸಿರಾಜ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಸ್ಟುವರ್ಟ್ ಬಿನ್ನಿ (6/4), ಅನಿಲ್ ಕುಂಬ್ಳೆ (6/12) ಹಾಗೂ ಜಸ್ಪ್ರೀತ್ ಬುಮ್ರಾ (6/19) ಅತೀ ಕಡಿಮೆ ರನ್ ನೀಡಿ 6 ವಿಕೆಟ್ ಪಡೆದ ದಾಖಲೆ ನಿರ್ಮಿಸಿದ್ದರು.
6 / 13
4- 50 ವಿಕೆಟ್ಗಳ ಸಾಧನೆ: ಈ 6 ವಿಕೆಟ್ಗಳೊಂದಿಗೆ ಏಕದಿನ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಪರ 50+ ವಿಕೆಟ್ ಪಡೆದ ಭಾರತೀಯ ಬೌಲರ್ಗಳ ಪಟ್ಟಿಯಲ್ಲೂ ಮೊಹಮ್ಮದ್ ಸಿರಾಜ್ ಸ್ಥಾನ ಪಡೆದಿದ್ದಾರೆ. ಸಿರಾಜ್ 29 ಪಂದ್ಯಗಳ ಮೂಲಕ ಈ ಸಾಧನೆ ಮಾಡಿದ್ದಾರೆ.
7 / 13
5- ವಿಶ್ವ ದಾಖಲೆ ನಿರ್ಮಾಣ: ಅತೀ ಕಡಿಮೆ ಎಸೆತಗಳಲ್ಲಿ 5 ವಿಕೆಟ್ ಕಬಳಿಸಿ ವಿಶ್ವ ದಾಖಲೆ ಕೂಡ ಸಿರಾಜ್ ಪಾಲಾಗಿದೆ. ಈ ಹಿಂದೆ ಶ್ರೀಲಂಕಾ ಚಾಮಿಂಡ ವಾಸ್ 16 ಎಸೆತಗಳಲ್ಲಿ 5 ವಿಕೆಟ್ ಕಬಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಸಿರಾಜ್ ಕೂಡ 16 ಎಸೆತಗಳಲ್ಲಿ ಈ ಸಾಧನೆ ಮಾಡಿ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.
8 / 13
6- 1002 ಎಸೆತಗಳಲ್ಲಿ ಸಾಧನೆ: ಮೊಹಮ್ಮದ್ ಸಿರಾಜ್ ಏಕದಿನ ಕ್ರಿಕೆಟ್ನಲ್ಲಿ ಅತೀ ಕಡಿಮೆ ಎಸೆತಗಳಲ್ಲಿ 50 ವಿಕೆಟ್ ಪೂರೈಸಿದ ವಿಶ್ವದ 2ನೇ ಬೌಲರ್ ಎನಿಸಿಕೊಂಡಿದ್ದಾರೆ. ಸಿರಾಜ್ ಈ ಸಾಧನೆ ಮಾಡಲು ಕೇವಲ 1002 ಎಸೆತಗಳನ್ನು ತೆಗೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಶ್ರೀಲಂಕಾದ ಅಜಂತಾ ಮೆಂಡಿಸ್ (847 ಎಸೆತಗಳು) ಅಗ್ರಸ್ಥಾನದಲ್ಲಿದ್ದಾರೆ.
9 / 13
7- ಎರಡನೇ ಬೌಲರ್: ಏಷ್ಯಾಕಪ್ ಇತಿಹಾಸದಲ್ಲೇ 6 ವಿಕೆಟ್ ಕಬಳಿಸಿದ 2ನೇ ಬೌಲರ್ ಎಂಬ ಹೆಗ್ಗಳಿಕೆ ಮೊಹಮ್ಮದ್ ಸಿರಾಜ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಶ್ರೀಲಂಕಾದ ಅಜಂತಾ ಮೆಂಡಿಸ್ 2008 ರಲ್ಲಿ ಈ ಸಾಧನೆ ಮಾಡಿದ್ದರು.
10 / 13
8- ಲಂಕಾ ವಿರುದ್ಧ ಅದ್ಭುತ ಪ್ರದರ್ಶನ: 6 ವಿಕೆಟ್ಗಳೊಂದಿಗೆ ಶ್ರೀಲಂಕಾ ವಿರುದ್ಧ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ವಕಾರ್ ಯೂನಿಸ್ ಅವರ ದಾಖಲೆಯನ್ನು ಸಿರಾಜ್ ಮುರಿದಿದ್ದಾರೆ. 1990 ರಲ್ಲಿ ಪಾಕ್ ವೇಗಿ ವಕಾರ್ ಯೂನಿಸ್ 26 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು. ಇದೀಗ 21 ರನ್ಗಳಿಗೆ 6 ವಿಕೆಟ್ ಕಬಳಿಸಿ ಸಿರಾಜ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.
11 / 13
9- ಫೈನಲ್ನಲ್ಲಿ ಮಿಂಚಿಂಗ್: ಏಕದಿನ ಕ್ರಿಕೆಟ್ನ ಫೈನಲ್ ಪಂದ್ಯದಲ್ಲಿ ಅತ್ಯಧಿಕ ವಿಕೆಟ್ ಪಡೆದ ಮೊದಲ ಭಾರತೀಯ ಹಾಗೂ ವಿಶ್ವದ 3ನೇ ಬೌಲರ್ ಎಂಬ ಹೆಗ್ಗಳಿಕೆಗೂ ಸಿರಾಜ್ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಪಾಕಿಸ್ತಾನದ ಅಖಿಬ್ ಜಾವೇದ್ (7/37) ಅಗ್ರಸ್ಥಾನದಲ್ಲಿದ್ದಾರೆ.
12 / 13
10- ಅತೀ ಕಡಿಮೆ ರನ್ಗೆ 6 ವಿಕೆಟ್: ಏಷ್ಯಾಕಪ್ ಫೈನಲ್ನಲ್ಲಿ ಅತೀ ಕಡಿಮೆ ರನ್ ನೀಡಿ 6 ವಿಕೆಟ್ ಕಬಳಿಸಿದ ಶ್ರೀಲಂಕಾದ ಅಜಂತಾ ಮೆಂಡಿಸ್ ಅವರ ದಾಖಲೆಯನ್ನು ಸಿರಾಜ್ ಸರಿಗಟ್ಟಿದ್ದಾರೆ. 2008 ರಲ್ಲಿ ಮೆಂಡಿಸ್ ಟೀಮ್ ಇಂಡಿಯಾ ವಿರುದ್ಧ 13 ರನ್ ನೀಡಿ 6 ವಿಕೆಟ್ ಪಡೆದಿದ್ದರು. ಸಿರಾಜ್ 13 ರನ್ ನೀಡುವಷ್ಟರಲ್ಲಿ 6 ವಿಕೆಟ್ ಕಬಳಿಸಿದ್ದರು.
13 / 13
ಒಟ್ಟಿನಲ್ಲಿ ಒಂದೇ ಪಂದ್ಯದ ಮೂಲಕ ಮಿಯಾನ್ ಮ್ಯಾಜಿಕ್ ತೋರಿಸಿ ಮೊಹಮ್ಮದ್ ಸಿರಾಜ್ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿರುವುದು ವಿಶೇಷ.