ವಿರಾಟ್ ಕೊಹ್ಲಿ ಇಲ್ಲದಿದ್ರೆ … ಮೊಹಮ್ಮದ್ ಸಿರಾಜ್ಗೆ ವಿಕೆಟ್ ಇಲ್ಲ..!
Mohammed Siraj: ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾ ಪರ ಈವರೆಗೆ 38 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 69 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಅವರು ಪಡೆದಿರುವುದು ಬರೋಬ್ಬರಿ 103 ವಿಕೆಟ್ಗಳು. ಇದರಲ್ಲಿ ವಿರಾಟ್ ಕೊಹ್ಲಿ ಜೊತೆಗಿದ್ದಾಗ ಕಬಳಿಸಿದ ವಿಕೆಟ್ಗಳ ಸಂಖ್ಯೆ 81 .
Updated on: Jun 23, 2025 | 9:04 AM

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ ಬೆನ್ನಲ್ಲೇ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ 'ನನ್ನ ಸೂಪರ್ ಹೀರೋ'ನನ್ನು ನಾನು ಇನ್ಮುಂದೆ ಮಿಸ್ ಮಾಡಿಕೊಳ್ಳಲಿದ್ದೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದರು. ಈ ಪೋಸ್ಟ್ ಎಷ್ಟು ಮಹತ್ವದ್ದು ಎಂಬುದು ಅರಿವಾಗಲು ಸಿರಾಜ್ ಅವರ ಟೆಸ್ಟ್ ಕೆರಿಯರ್ನ ಅಂಕಿ ಅಂಶಗಳನ್ನು ಗಮನಿಸಲೇಬೇಕು.

ಏಕೆಂದರೆ ಮೊಹಮ್ಮದ್ ಸಿರಾಜ್ ಟೆಸ್ಟ್ ಕೆರಿಯರ್ ಆರಂಭಿಸಿದ್ದು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ. ಅದರಲ್ಲೂ ಕಿಂಗ್ ಕೊಹ್ಲಿ ಗರಡಿಯಲ್ಲಿ ಪಳಗಿದ್ದ ಸಿರಾಜ್ ಅತ್ಯುತ್ತಮ ಬೌಲರ್ ಆಗಿ ರೂಪುಗೊಂಡಿದ್ದರು. ಹೀಗೆ ಸಿರಾಜ್ನನ್ನು ಮುಂದಿಟ್ಟು ಕೊಹ್ಲಿ ರೂಪಿಸುತ್ತಿದ್ದ ತಂತ್ರಗಳು ಟೀಮ್ ಇಂಡಿಯಾಗೆ ಫಲ ನೀಡುತ್ತಿತ್ತು. ಈ ಯಶಸ್ವಿ ಪ್ರದರ್ಶನದಿಂದಾಗಿ ಮೊಹಮ್ಮದ್ ಸಿರಾಜ್ ಭಾರತ ಟೆಸ್ಟ್ ತಂಡದ ಖಾಯಂ ಸದಸ್ಯರಾಗಿದ್ದರು.

ಹೀಗೆ ಭಾರತ ತಂಡದ ಖಾಯಂ ಸದಸ್ಯರಾದರೂ ವಿರಾಟ್ ಕೊಹ್ಲಿಯ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಸಿರಾಜ್ ಕಡೆಯಿಂದ ಉತ್ತಮ ಪ್ರದರ್ಶನ ಮೂಡಿಬಂದಿಲ್ಲ ಎಂಬುದೇ ಸತ್ಯ. ಅಂದರೆ ಕಿಂಗ್ ಕೊಹ್ಲಿ ಇದ್ದಾಗ ಮಾತ್ರ ಸಿರಾಜ್ ಅತ್ಯುತ್ತಮ ದಾಳಿ ಸಂಘಟಿಸಿದ್ದಾರೆ. ಅವರು ಇಲ್ಲದಿದ್ದರೆ, ವಿಕೆಟ್ ಪಡೆಯಲು ಹರಸಾಹಸ ಪಟ್ಟಿದ್ದಾರೆ. ಅದು ಈಗ ಇಂಗ್ಲೆಂಡ್ನಲ್ಲೂ ಮುಂದುವರೆದಿದೆ.

ವಿರಾಟ್ ಕೊಹ್ಲಿ ತಂಡದಲ್ಲಿದ್ದಾಗ ಮೊಹಮ್ಮದ್ ಸಿರಾಜ್ 51 ಟೆಸ್ಟ್ ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ವೇಳೆ ಸಿರಾಜ್ ಪಡೆದಿರುವುದು ಬರೋಬ್ಬರಿ 81 ವಿಕೆಟ್ಗಳು. ಅಂದರೆ ಕೊಹ್ಲಿ ಜೊತೆಗಿದ್ದಾಗ ಸಿರಾಜ್ 49ರ ಸ್ಟ್ರೈಕ್ ರೇಟ್ನಲ್ಲಿ ವಿಕೆಟ್ ಕಬಳಿಸಿದ್ದಾರೆ.

ಮತ್ತೊಂದೆಡೆ ವಿರಾಟ್ ಕೊಹ್ಲಿಯ ಅನುಪಸ್ಥಿತಿಯ ನಡುವೆ ಮೊಹಮ್ಮದ್ ಸಿರಾಜ್ 18 ಟೆಸ್ಟ್ ಇನಿಂಗ್ಸ್ ಆಡಿದ್ದಾರೆ. ಈ ವೇಳೆ ಪಡೆದಿರುವುದು ಕೇವಲ 20 ವಿಕೆಟ್ ಮಾತ್ರ. ಅಲ್ಲದೆ ಕೊಹ್ಲಿ ಇಲ್ಲದಿದ್ದಾಗ ಸಿರಾಜ್ ಅವರ ಬೌಲಿಂಗ್ ಸ್ಟ್ರೈಕ್ ರೇಟ್ 71 ಎಂದರೆ ನಂಬಲೇಬೇಕು. ಅಂದರೆ ಒಂದು ವಿಕೆಟ್ ಪಡೆಯಲು ಕನಿಷ್ಠ 71 ಎಸೆತಗಳನ್ನು ತೆಗೆದುಕೊಂಡಿದ್ದಾರೆ.

ಈ ಅಂಕಿ ಅಂಶಗಳೇ ಮೊಹಮ್ಮದ್ ಸಿರಾಜ್ ಪಾಲಿಗೆ ವಿರಾಟ್ ಕೊಹ್ಲಿ ನಾಯಕತ್ವ ಎಷ್ಟು ಮುಖ್ಯವಾಗಿತ್ತು ಎಂಬುದನ್ನು ತೋರಿಸುತ್ತದೆ. ಹೀಗಾಗಿಯೇ ಕೊಹ್ಲಿ ಟೆಸ್ಟ್ ನಿವೃತ್ತಿ ಘೋಷಿಸಿದಾಗ ನನ್ನ ಸೂಪರ್ ಹೀರೋನನ್ನು ನಾನು ಇನ್ಮುಂದೆ ಮಿಸ್ ಮಾಡಿಕೊಳ್ಳಲಿದ್ದೇನೆ ಎಂದಿರಬಹುದು.









