Updated on: Feb 20, 2022 | 9:06 PM
ವೆಸ್ಟ್ ಇಂಡೀಸ್ ವಿರುದ್ದದ ಕೊನೆಯ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಸೂರ್ಯ ಕುಮಾರ್ ಯಾದವ್ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. 15 ಓವರ್ನಲ್ಲಿ 98 ರನ್ಗಳಿಸಿದ್ದ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಕೊನೆಯ ಐದು ಓವರ್ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದರು.
31 ಎಸೆತಗಳಲ್ಲಿ 65 ರನ್ ಬಾರಿಸುವ ಮೂಲಕ ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್ನಲ್ಲಿ ತಮ್ಮ 4ನೇ ಅರ್ಧಶತಕ ಪೂರೈಸಿದ್ದರು. ಈ ಸ್ಪೋಟಕ ಇನಿಂಗ್ಸ್ನಲ್ಲಿ ಸೂರ್ಯಕುಮಾರ್ ಬ್ಯಾಟ್ನಿಂದ ಸಿಡಿದದ್ದು ಬರೋಬ್ಬರಿ 7 ಭರ್ಜರಿ ಸಿಕ್ಸರ್ಗಳು ಮತ್ತು ಏಕೈಕ ಫೋರ್.
ಅದರಲ್ಲೂ ಸೂರ್ಯಕುಮಾರ್ ಅವರ ಅಬ್ಬರಕ್ಕೆ ನಲುಗಿದ ವೆಸ್ಟ್ ಇಂಡೀಸ್ ಬೌಲರುಗಳು ಕೊನೆಯ 5 ಓವರ್ಗಳಲ್ಲಿ ನೀಡಿದ್ದು ಬರೋಬ್ಬರಿ 86 ರನ್ಗಳು. ಇದರೊಂದಿಗೆ ಟೀಮ್ ಇಂಡಿಯಾ ವಿಶೇಷ ದಾಖಲೆಯೊಂದನ್ನು ತನ್ನದಾಗಿಸಿಕೊಂಡಿತು.
ಹೌದು, ಡೆತ್ ಓವರ್ಗಳಲ್ಲಿ (16-20) ಟೀಮ್ ಇಂಡಿಯಾ ಕಲೆಹಾಕಿದ ಗರಿಷ್ಠ ಸ್ಕೋರ್ ಇದಾಗಿದೆ. ಇದಕ್ಕೂ ಮುನ್ನ 2007 ರಲ್ಲಿ ಇಂಗ್ಲೆಂಡ್ ವಿರುದ್ದ ಭಾರತ ತಂಡವು ಕೊನೆಯ 5 ಓವರ್ಗಳಲ್ಲಿ 80 ರನ್ ಬಾರಿಸಿದ್ದರು. ಇದೀಗ ಹಳೆಯ ದಾಖಲೆಯನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಅದರಂತೆ ಕೊನೆಯ 30 ಎಸೆತಗಳಲ್ಲಿ 86 ರನ್ ಬಾರಿಸುವ ಮೂಲಕ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಟಿ20 ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 184 ರನ್ ಕಲೆಹಾಕಿದೆ.