- Kannada News Photo gallery Cricket photos Most T20 Runs: Jos Buttler Complete 10 Thousand Runs in T20
Jos Buttler: 6 ಭರ್ಜರಿ ಸಿಕ್ಸ್, 8 ಫೋರ್: ವಿಶ್ವ ದಾಖಲೆ ಬರೆದ ಜೋಸ್ ಬಟ್ಲರ್..!
Jos Buttler Records: ಲಂಕಾಶೈರ್ಗೆ ಫಿಲ್ ಸಾಲ್ಟ್ ಹಾಗೂ ಜೋಸ್ ಬಟ್ಲರ್ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 43 ರನ್ ಪೇರಿಸಿ ಸಾಲ್ಟ್ (16) ನಿರ್ಗಮಿಸಿದರು. ಮತ್ತೊಂದೆಡೆ ಬಟ್ಲರ್ ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರೆಸಿದ್ದರು.
Updated on: Jun 24, 2023 | 6:00 PM

ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಟಿ20 ಬ್ಲಾಸ್ಟ್ ಟೂರ್ನಿಯಲ್ಲಿ ಜೋಸ್ ಬಟ್ಲರ್ (Jos Buttler) ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಲಂಕಾಶೈರ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಡರ್ಬಿಶೈರ್ ತಂಡವು ಫೀಲ್ಡಿಂಗ್ ಆಯ್ದುಕೊಂಡಿತು.

ಮಳೆಯ ಕಾರಣ 15 ಓವರ್ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದ ಲಂಕಾಶೈರ್ಗೆ ಫಿಲ್ ಸಾಲ್ಟ್ ಹಾಗೂ ಜೋಸ್ ಬಟ್ಲರ್ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 43 ರನ್ ಪೇರಿಸಿ ಸಾಲ್ಟ್ (16) ನಿರ್ಗಮಿಸಿದರು. ಮತ್ತೊಂದೆಡೆ ಬಟ್ಲರ್ ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರೆಸಿದ್ದರು.

2ನೇ ವಿಕೆಟ್ಗೆ ಲಿಯಾಮ್ ಲಿವಿಂಗ್ಸ್ಟೋನ್ ಜೊತೆಗೂಡಿ ಸ್ಪೋಟಕ ಇನಿಂಗ್ಸ್ ಕಟ್ಟಿದ ಜೋಸ್ ಬಟ್ಲರ್ 101 ರನ್ಗಳ ಜೊತೆಯಾಟವಾಡಿದರು. ಈ ವೇಳೆ ಬಟ್ಲರ್ ಬ್ಯಾಟ್ನಿಂದ 6 ಭರ್ಜರಿ ಸಿಕ್ಸ್ ಹಾಗೂ 8 ಫೋರ್ಗಳು ಮೂಡಿಬಂದಿದ್ದವು.

ಅಲ್ಲದೆ ಕೇವಲ 39 ಎಸೆತಗಳಲ್ಲಿ 89 ರನ್ ಬಾರಿಸಿದ ಜೋಸ್ ಬಟ್ಲರ್ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ 3 ಸಿಕ್ಸ್ ಹಾಗೂ 1 ಫೋರ್ನೊಂದಿಗೆ ಅಜೇಯ 47 ರನ್ ಬಾರಿಸುವ ಮೂಲಕ ಲಿವಿಂಗ್ಸ್ಟೋನ್ ತಂಡದ ಮೊತ್ತವನ್ನು ನಿಗದಿತ 15 ಓವರ್ಗಳಲ್ಲಿ 177 ಕ್ಕೆ ತಂದು ನಿಲ್ಲಿಸಿದರು.

178 ರನ್ಗಳ ಬೃಹತ್ ಗುರಿಯನ್ನು ಬೆನ್ನತಿದ ಡರ್ಬಿಶೈರ್ ಪರ ಹ್ಯಾರಿ ಕೇಮ್ 32 ಎಸೆತಗಳಲ್ಲಿ 45 ರನ್ ಬಾರಿಸಿದರು. ಇದಾಗ್ಯೂ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಆಟ ಮೂಡಿಬಂದಿರಲಿಲ್ಲ. ಪರಿಣಾಮ ಡರ್ಬಿಶೈರ್ ತಂಡವು ನಿಗದಿತ 15 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 150 ರನ್ಗಳಿಸಿ 27 ರನ್ಗಳಿಂದ ಸೋಲೋಪ್ಪಿಕೊಂಡಿತು.

ವಿಶೇಷ ಎಂದರೆ ಈ ಪಂದ್ಯದಲ್ಲಿ 89 ರನ್ ಬಾರಿಸುವ ಮೂಲಕ ಅಬ್ಬರಿಸಿದ ಜೋಸ್ ಬಟ್ಲರ್ ಟಿ20 ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಪೂರೈಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ 9ನೇ ಆಟಗಾರ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಇದಲ್ಲದೆ ಈ ಸಾಧನೆ ಮಾಡಿದ ಇಂಗ್ಲೆಂಡ್ನ 2ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಅಲೆಕ್ಸ್ ಹೇಲ್ಸ್ ಟಿ20 ಕ್ರಿಕೆಟ್‌ನಲ್ಲಿ 10 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ.

ಇದೀಗ 350 ಇನಿಂಗ್ಸ್ಗಳ ಮೂಲಕ ಜೋಸ್ ಬಟ್ಲರ್ ಒಟ್ಟು 10080 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ 10 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ ವಿಶೇಷ ಸಾಧಕರ ಪಟ್ಟಿಗೆ ಬಟ್ಲರ್ ಸೇರ್ಪಡೆಯಾಗಿದ್ದಾರೆ.
