Steve Smith: ಕ್ಯಾಚ್ ಹಿಡಿದು ದಾಖಲೆ ಬರೆದ ಸ್ಟೀವ್ ಸ್ಮಿತ್
Most catches in Test: ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಕ್ಯಾಚ್ ಹಿಡಿದ ವಿಶ್ವ ದಾಖಲೆ ಇರುವುದು ಟೀಮ್ ಇಂಡಿಯಾ ಆಟಗಾರ ರಾಹುಲ್ ದ್ರಾವಿಡ್ (Rahul Dravid) ಹೆಸರಿನಲ್ಲಿ ಎಂಬುದು ವಿಶೇಷ. ಇದೀಗ ಆಸ್ಟ್ರೇಲಿಯಾ ತಂಡದ ಸ್ಟೀವ್ ಸ್ಮಿತ್ ಮಾಜಿ ಆಟಗಾರ ಮಾರ್ಕ್ ವಾ ಅವರನ್ನು ಹಿಂದಿಕ್ಕಿ ಈ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ್ದಾರೆ.
Updated on: Mar 03, 2024 | 9:54 AM

ವೆಲ್ಲಿಂಗ್ಟನ್ನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ (Steve Smith) ಅತ್ಯುತ್ತಮ ಫೀಲ್ಡಿಂಗ್ ಪ್ರದರ್ಶಿಸಿದ್ದರು. ಅದರಲ್ಲೂ ಸ್ಲಿಪ್ನಲ್ಲಿ ಫೀಲ್ಡ್ ಮಾಡಿದ್ದ ಸ್ಮಿತ್ ಮೂರು ಕ್ಯಾಚ್ಗಳನ್ನು ಹಿಡಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಕ್ಯಾಚ್ಗಳನ್ನು ಹಿಡಿದ ಆಸ್ಟ್ರೇಲಿಯಾದ 2ನೇ ಆಟಗಾರ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಮಾಜಿ ಆಟಗಾರ ಮಾರ್ಕ್ ವಾ 2ನೇ ಸ್ಥಾನದಲ್ಲಿದ್ದರು. 245 ಟೆಸ್ಟ್ಗಳಲ್ಲಿ ಕಣಕ್ಕಿಳಿದಿದ್ದ ಮಾರ್ಕ್ ವಾ ಒಟ್ಟು 181 ಕ್ಯಾಚ್ಗಳನ್ನು ಹಿಡಿದಿದ್ದರು. ಇದೀಗ ಈ ದಾಖಲೆಯನ್ನು ಮುರಿದು ಸ್ಟೀವ್ ಸ್ಮಿತ್ ಇದೀಗ ಆಸ್ಟ್ರೇಲಿಯಾ ಪರ ಅತ್ಯಧಿಕ ಟೆಸ್ಟ್ ಕ್ಯಾಚ್ ಹಿಡಿದ 2ನೇ ಫೀಲ್ಡರ್ ಎನಿಸಿಕೊಂಡಿದ್ದಾರೆ.

205 ಟೆಸ್ಟ್ ಇನಿಂಗ್ಸ್ಗಳಲ್ಲಿ ಫೀಲ್ಡಿಂಗ್ ಮಾಡಿರುವ ಸ್ಟೀವ್ ಸ್ಮಿತ್ ಇದುವರೆಗೆ 183 ಕ್ಯಾಚ್ಗಳನ್ನು ಹಿಡಿದಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಕ್ಯಾಚ್ ಹಿಡಿದ ವಿಶ್ವದ 6ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಟೀಮ್ ಇಂಡಿಯಾದ ಮಾಜಿ ಆಟಗಾರ ರಾಹುಲ್ ದ್ರಾವಿಡ್. 301 ಟೆಸ್ಟ್ ಇನಿಂಗ್ಸ್ಗಳಲ್ಲಿ ಫೀಲ್ಡಿಂಗ್ ಮಾಡಿರುವ ದ್ರಾವಿಡ್ ಒಟ್ಟು 210 ಕ್ಯಾಚ್ಗಳನ್ನು ಹಿಡಿದು ಟೆಸ್ಟ್ ಕ್ರಿಕೆಟ್ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಇನ್ನು ಮಹೇಲ ಜಯವರ್ಧನೆ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಶ್ರೀಲಂಕಾ ತಂಡದ ಮಾಜಿ ನಾಯಕ 270 ಟೆಸ್ಟ್ ಇನಿಂಗ್ಸ್ಗಳಲ್ಲಿ ಒಟ್ಟು 205 ಕ್ಯಾಚ್ಗಳನ್ನು ಹಿಡಿದಿದ್ದಾರೆ.

ಹಾಗೆಯೇ ಸೌತ್ ಆಫ್ರಿಕಾ ತಂಡದ ಮಾಜಿ ಆಲ್ರೌಂಡರ್ ಜಾಕ್ಸ್ ಕಾಲಿಸ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, 315 ಟೆಸ್ಟ್ ಇನಿಂಗ್ಸ್ಗಳಲ್ಲಿ ಒಟ್ಟು 200 ಕ್ಯಾಚ್ಗಳನ್ನು ಹಿಡಿದಿದ್ದಾರೆ.

ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಇದ್ದು, ಪಂಟರ್ ಖ್ಯಾತಿಯ ಪಾಂಟಿಂಗ್ 328 ಟೆಸ್ಟ್ ಇನಿಂಗ್ಸ್ಗಳಲ್ಲಿ 196 ಕ್ಯಾಚ್ಗಳನ್ನು ಹಿಡಿದಿದ್ದಾರೆ.

ಹಾಗೆಯೇ ಇಂಗ್ಲೆಂಡ್ನ ಜೋ ರೂಟ್ ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ರೂಟ್ 264 ಟೆಸ್ಟ್ ಇನಿಂಗ್ಸ್ಗಳಿಂದ 192 ಕ್ಯಾಚ್ಗಳನ್ನು ಹಿಡಿದು ಮಿಂಚಿದ್ದಾರೆ.

ಇದೀಗ 205 ಟೆಸ್ಟ್ ಇನಿಂಗ್ಸ್ಗಳ ಮೂಲಕ ಸ್ಟೀವ್ ಸ್ಮಿತ್ 183 ಕ್ಯಾಚ್ಗಳನ್ನು ಹಿಡಿದಿದ್ದು, ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಕ್ಯಾಚ್ಗಳನ್ನು ಹಿಡಿದ ಆಟಗಾರರ ಪಟ್ಟಿಯಲ್ಲಿ 6ನೇ ಸ್ಥಾನ ಅಲಂಕರಿಸಿದ್ದಾರೆ.
