
ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಭಾರತಕ್ಕೆ ಎರಡೆರಡು ವಿಶ್ವಕಪ್ಗಳನ್ನು ಗೆಲ್ಲಿಸಿಕೊಟ್ಟ ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಇದೀಗ ಮತ್ತೊಮ್ಮೆ ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಅಚ್ಚರಿಯ ಸಂಗತಿಯೆಂದರೆ ಎಲ್ಲವೂ ಅಂದುಕೊಂಡಂತೆ ನಡೆದರೆ ಧೋನಿ ಎಂದರೆ ಉರಿದು ಬೀಳುವ ಗೌತಮ್ ಗಂಭೀರ್ ಅವರೊಂದಿಗೆ ಧೋನಿ ಕೆಲಸ ಮಾಡಬೇಕಾಗುತ್ತದೆ.

ಪ್ರಸ್ತುತ ಟಿ20 ಏಷ್ಯಾಕಪ್ಗೆ ಟೀಂ ಇಂಡಿಯಾ ಸಿದ್ಧತೆಗಳನ್ನು ನಡೆಸುತ್ತಿದರೆ, ಇತ್ತ ಬಿಸಿಸಿಐ ಕಣ್ಣುಗಳು ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಮೇಲೆ ಬಿದ್ದಿದೆ. ಹೀಗಾಗಿ ಈ ಚುಟುಕು ವಿಶ್ವಕಪ್‌ಗೆ ಈಗಿನಿಂದಲೇ ತಯಾರಿ ನಡೆಸುತ್ತಿರುವ ಬಿಸಿಸಿಐ, ತಂಡದ ಮಾಜಿ ನಾಯಕ ಎಂಎಸ್ ಧೋನಿಗೆ ತಂಡದ ಮೆಂಟರ್ ಹುದ್ದೆಯನ್ನು ನೀಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ಮಾಧ್ಯಮ ವರದಿಗಳ ಪ್ರಕಾರ 2026 ರ ಟಿ20 ವಿಶ್ವಕಪ್‌ಗೆ ಧೋನಿಯನ್ನು ಟೀಂ ಇಂಡಿಯಾದ ಮೆಂಟರ್ ಆಗಿ ನೇಮಿಸಲು ಚಿಂತಿಸಿದೆ. ವಾಸ್ತವವಾಗಿ ಧೋನಿ ಈ ಹುದ್ದೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಅಂದರೆ 2021 ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ನಲ್ಲೂ ಧೋನಿ ಮೆಂಟರ್ ಆಗಿ ಕೆಲಸ ಮಾಡಿದ್ದರು. ಆದರೆ ಆ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ಗುಂಪು ಹಂತದಲ್ಲಿ ತನ್ನ ಪ್ರಯಾಣ ಮುಗಿಸಿತ್ತು.

ಆದಾಗ್ಯೂ ಬಿಸಿಸಿಐ ಮತ್ತೊಮ್ಮೆ ಧೋನಿ ಕಡೆಗೆ ಒಲವು ತೋರಿದ ಎಂದು ಕ್ರಿಕ್‌ಬ್ಲಾಗರ್ ವರದಿ ಮಾಡಿದೆ. ವರದಿಯ ಪ್ರಕಾರ ಧೋನಿಗೆ ಈ ಹುದ್ದೆ ನೀಡಬಹುದೆಂದು ಬಿಸಿಸಿಐ ಮೂಲವೊಂದು ದೃಢಪಡಿಸಿದೆ. ಅವರ ಕಾರ್ಯತಂತ್ರದ ಚಿಂತನೆ, ಶಾಂತ ನಾಯಕತ್ವ ಕೌಶಲ್ಯ ಮತ್ತು ಪಂದ್ಯಾವಳಿ ಗೆದ್ದ ಅನುಭವವು ತಂಡವನ್ನು ಮತ್ತೊಂದು ವಿಶ್ವ ಪ್ರಶಸ್ತಿ ಸವಾಲಿಗೆ ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂಬುದು ಮಂಡಳಿಯ ಅಭಿಪ್ರಾಯವಾಗಿದೆ. ಆದಾಗ್ಯೂ, ಧೋನಿ ಈ ಪ್ರಸ್ತಾಪವನ್ನು ಸ್ವೀಕರಿಸುತ್ತಾರೋ ಇಲ್ಲವೋ ಎಂಬುದು ಪ್ರಶ್ನೆ.

ಗೌತಮ್ ಗಂಭೀರ್ ಪ್ರಸ್ತುತ ಭಾರತ ತಂಡದ ಮುಖ್ಯ ತರಬೇತುದಾರರಾಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಧೋನಿ ಮಾರ್ಗದರ್ಶಕರಾದರೆ, ಈ ಇಬ್ಬರು ದಂತಕಥೆಗಳು ಒಟ್ಟಿಗೆ ಕೆಲಸ ಮಾಡಬೇಕಾಗುತ್ತದೆ. ಆದಾಗ್ಯೂ, ಕಳೆದ ಕೆಲವು ವರ್ಷಗಳಿಂದ, ವಿಶೇಷವಾಗಿ ಗೌತಮ್ ಗಂಭೀರ್ ಅವರ ಹೇಳಿಕೆಗಳಿಂದಾಗಿ, ಈ ಇಬ್ಬರ ನಡುವಿನ ಸಂಬಂಧದಲ್ಲಿ ಹಳಸಿದ ವರದಿಗಳಿವೆ. ಆದಾಗ್ಯೂ, ಧೋನಿ ಮತ್ತು ಗಂಭೀರ್ ಯಾವಾಗಲೂ ಮೈದಾನದಲ್ಲಿ ಪರಸ್ಪರ ಗೌರವಿಸುವುದನ್ನು ಕಾಣಬಹುದು.