ಐದು ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ಗೆ ಈ ಸೀಸನ್ ಇಲ್ಲಿಯವರೆಗೆ ಉತ್ತಮವಾಗಿ ನಡೆದಿಲ್ಲ. ರುತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ, ಚೆನ್ನೈ ತಂಡವು ಆಡಿರುವ ಮೊದಲ 3 ಪಂದ್ಯಗಳಲ್ಲಿ 2 ಪಂದ್ಯಗಳಲ್ಲಿ ಸೋತಿದೆ. ಮೊದಲ ಪಂದ್ಯವನ್ನು ಗೆದ್ದ ನಂತರ, ತಂಡವು ಸತತ ಎರಡು ಸೋಲುಗಳನ್ನು ಎದುರಿಸಬೇಕಾಗಿದೆ.
ಹೀಗಾಗಿ ತಂಡವು ಮುಂದಿನ ಪಂದ್ಯದಿಂದ ಮತ್ತೊಮ್ಮೆ ಗೆಲುವಿನ ಲಯಕ್ಕೆ ಮರಳಲು ಎದುರು ನೋಡುತ್ತಿದೆ. ಆದರೆ ಮುಂದಿನ ಪಂದ್ಯಕ್ಕೂ ಮುನ್ನ ತಂಡದ ನಾಯಕತ್ವದಲ್ಲಿ ಬದಲಾವಣೆ ಆಗಬಹುದು ಎಂದು ವರದಿಯಾಗಿದೆ. ಮುಂದಿನ ಪಂದ್ಯಕ್ಕೆ ಎಂಎಸ್ ಧೋನಿ ಮತ್ತೊಮ್ಮೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಬಹುದು ಎಂದು ಹೇಳಲಾಗುತ್ತಿದೆ.
ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಎಂಎಸ್ ಧೋನಿಯನ್ನು ಪೂರ್ಣ ಪ್ರಮಾಣದ ನಾಯಕನಾಗಿ ಮತ್ತೊಮ್ಮೆ ನೇಮಿಸುತ್ತಿಲ್ಲ. ಬದಲಿಗೆ ತಂಡದ ಖಾಯಂ ನಾಯಕ ರುತುರಾಜ್ ಗಾಯಕ್ವಾಡ್ ಇಂಜುರಿಗೊಂಡಿರುವ ಕಾರಣ ಅವರು ಮುಂದಿನ ಪಂದ್ಯದಲ್ಲಿ ಆಡುವ ಲಕ್ಷಣಗಳಿಲ್ಲ. ಹೀಗಾಗಿ ರುತುರಾಜ್ ತಂಡಕ್ಕೆ ಮರಳುವವರೆಗೂ ಧೋನಿಗೆ ನಾಯಕತ್ವ ನೀಡುವ ಸಾಧ್ಯತೆಗಳಿವೆ.
ಈ ಸುದ್ದಿ ನಿಜವಾದರೆ, ಕಳೆದ ವರ್ಷ ಚೆನ್ನೈ ತಂಡದ ನಾಯಕತ್ವ ತ್ಯಜಿಸಿದ್ದ ಎಂಎಸ್ ಧೋನಿ, 17 ಪಂದ್ಯಗಳ ನಂತರ ಮತ್ತೆ ತಂಡದ ನಾಯಕತ್ವ ವಹಿಸಿಕೊಳ್ಳುವುದನ್ನು ಕಾಣಬಹುದು. ಏಪ್ರಿಲ್ 5 ರ ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಚೆನ್ನೈನ ತವರು ಮೈದಾನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಆ ಪಂದ್ಯದಲ್ಲಿ ಧೋನಿ ನಾಯಕರಾಗಿ ಕಾಣಿಸಿಕೊಳ್ಳಬಹುದು.
ಪಂದ್ಯಕ್ಕೂ ಒಂದು ದಿನ ಮೊದಲು ಚೆನ್ನೈ ತಂಡದ ಬ್ಯಾಟಿಂಗ್ ಕೋಚ್ ಮೈಕೆಲ್ ಹಸ್ಸಿ ಈ ಬಗ್ಗೆ ಸುಳಿವು ನೀಡಿದ್ದರು. ಪತ್ರಿಕಾಗೋಷ್ಠಿಯಲ್ಲಿ ರುತುರಾಜ್ ಗಾಯಕ್ವಾಡ್ ಅವರ ಗಾಯದ ಕುರಿತು ಮಾಹಿತಿ ನೀಡಿದ ಹಸ್ಸಿ, ಅವರು ಎಷ್ಟು ಬೇಗನೆ ಚೇತರಿಸಿಕೊಳ್ಳುತ್ತಾರೆ ಎಂಬುದರ ಮೇಲೆ ಅವರ ಆಟವು ಅವಲಂಬಿತವಾಗಿರುತ್ತದೆ. ರುತುರಾಜ್ ಅವರ ಮೊಣಕೈ ಇನ್ನೂ ಊದಿಕೊಂಡಿದ್ದು, ಶುಕ್ರವಾರ ಸಂಜೆ ಅವರು ಅಭ್ಯಾಸ ಅವಧಿಯಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಆ ನಂತರ ಅವರು ಆಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹಸ್ಸಿ ಹೇಳಿದರು.
ಆ ಬಳಿಕ ಎಲ್ಲರೂ ಅಚ್ಚರಿಗೊಳ್ಳುವಂತ ಮಾಹಿತಿ ನೀಡಿದ ಹಸ್ಸಿ, ಒಂದು ವೇಳೆ ನಾಳಿನ ಪಂದ್ಯಕ್ಕೆ ಗಾಯಕ್ವಾಡ್ ಫಿಟ್ ಆಗದೆ ಹೋದರೆ, ಅವರ ಸ್ಥಾನದಲ್ಲಿ ತಂಡದ ಯುವ ವಿಕೆಟ್ ಕೀಪರ್ ತಂಡವನ್ನು ಮುನ್ನಡೆಸಬಹುದು ಎಂದು ತಮಾಷೆಯಾಗಿ ಸುಳಿವು ನೀಡಿದರು. ಅಂದರೆ ಹಸ್ಸಿ, ನೇರವಾಗಿ ಧೋನಿ ಅವರ ಹೆಸರಿಸುವ ತೆಗೆದುಕೊಳ್ಳುವ ಬದಲು, ಯುವ ವಿಕೆಟ್ ಕೀಪರ್ ಎಂದು ಹೇಳುವ ಮೂಲಕ ಧೋನಿಗೆ ನಾಯಕತ್ವ ನೀಡುವ ಸುಳಿವು ನೀಡಿದರು.
ಚೆನ್ನೈ ತಂಡವನ್ನು ಐದು ಐಪಿಎಲ್ ಪ್ರಶಸ್ತಿಗಳಿಗೆ ಕರೆದೊಯ್ದ ಎಂಎಸ್ ಧೋನಿ, ಕೊನೆಯ ಬಾರಿಗೆ ಸುಮಾರು 2 ವರ್ಷಗಳ ಹಿಂದೆ ತಂಡದ ನಾಯಕತ್ವ ವಹಿಸಿದ್ದರು. ಲೀಗ್‌ನ ಅತ್ಯಂತ ಯಶಸ್ವಿ ನಾಯಕ ಧೋನಿ, ಕೊನೆಯ ಬಾರಿಗೆ ಐಪಿಎಲ್ 2023 ರ ಫೈನಲ್‌ನಲ್ಲಿ ತಂಡವನ್ನು ಮುನ್ನಡೆಸಿ ಪ್ರಶಸ್ತಿಯನ್ನು ಗೆದ್ದಿದ್ದರು. ಆ ಬಳಿಕ 2024 ರ ಸೀಸನ್ನಲ್ಲಿ ಧೋನಿ ನಾಯಕತ್ವದಿಂದ ಕೆಳಗಿಳಿದಿದ್ದರು. ಆ ಬಳಿಕ ರುತುರಾಜ್ ಗಾಯಕ್ವಾಡ್ ಸಿಎಸ್ಕೆ ತಂಡದ ನಾಯಕರಾಗಿ ನೇಮಕಗೊಂಡರು.