- Kannada News Photo gallery Cricket photos IPL 2025: Sunrisers Hyderabad's Ishan Kishan's Inconsistent Performance
IPL 2025: ಡಬಲ್ ಸೆಂಚುರಿ ಹೊಡೀತೀನಿ ಎಂದಿದ್ದ ಕಿಶನ್ಗೆ ಒಂದಂಕಿಯನ್ನೂ ದಾಟಲಾಗ್ತಿಲ್ಲ..!
Ishan Kishan Inconsistent Performance: ಐಪಿಎಲ್ 2025ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಇಶಾನ್ ಕಿಶನ್ ಅವರ ಪ್ರದರ್ಶನ ಏರಿಳಿತಗಳಿಂದ ಕೂಡಿದೆ. ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ ಅವರು, ನಂತರದ ಮೂರು ಪಂದ್ಯಗಳಲ್ಲಿ ಒಂದಂಕಿಯನ್ನು ಸಹ ದಾಟಲು ವಿಫಲರಾಗಿದ್ದಾರೆ. ಲಕ್ನೋ, ಡೆಲ್ಲಿ ಮತ್ತು ಕೋಲ್ಕತ್ತಾ ವಿರುದ್ಧದ ಪಂದ್ಯಗಳಲ್ಲಿ ಅವರು ಬಹಳ ಕಡಿಮೆ ರನ್‌ಗಳಿಗೆ ಔಟ್ ಆಗಿದ್ದಾರೆ.
Updated on: Apr 04, 2025 | 3:48 PM

2025 ರ ಐಪಿಎಲ್ ಗೆಲ್ಲುವ ಪ್ರಮುಖ ತಂಡಗಳಲ್ಲಿ ಕಳೆದ ಬಾರಿಯ ರನ್ನರ್ ಅಪ್ ಸನ್‌ರೈಸರ್ಸ್ ಹೈದರಾಬಾದ್ ತಂಡ ಕೂಡ ಒಂದಾಗಿದೆ. ಇದಕ್ಕೆ ಪೂರಕವಾಗಿ ಟೂರ್ನಿಯಲ್ಲಿ ಆಡಿದ್ದ ಮೊದಲ ಪಂದ್ಯದಲ್ಲೇ ಸ್ಫೋಟಕ ಬ್ಯಾಟಿಂಗ್ ಮೂಲಕ ಎಲ್ಲ ತಂಡಗಳ ನಿದ್ದೆಗೆಡಿಸಿದ್ದ ಸನ್‌ರೈಸರ್ಸ್ ತಂಡದ ಬ್ಯಾಟರ್ಗಳಿಗೆ ಆ ನಂತರ ಮ್ಯಾಜಿಕ್ ತೊರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ತಂಡ ಸತತ 3 ಸೋಲುಗಳನ್ನು ಕಂಡಿದೆ.

ಅದರಲ್ಲೂ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದ ಇಶಾನ್ ಕಿಶನ್, ಉಳಿದ 3 ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದಾರೆ. ವಾಸ್ತವವಾಗಿ ಈ ಪಂದ್ಯದಲ್ಲಿ ಶತಕ ಸಿಡಿಸಿದ ಬಳಿಕ ಮಾತನಾಡಿದ್ದ ಕಿಶನ್ ಬಳಿ ಮುಂದಿನ ಪಂದ್ಯದಲ್ಲಿ ದ್ವಿಶತಕ ಬಾರಿಸ್ತೀರಾ ಎಂಬ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ್ದ ಕಿಶನ್, ಅವಕಾಶ ಸಿಕ್ಕರೆ ಖಂಡಿತ ಬಾರಿಸ್ತೀನಿ ಎಂದಿದ್ದರು.

ಆದರೆ ಆಡಿರುವ 3 ಪಂದ್ಯಗಳಲ್ಲಿ ಅಂತಹ ಅವಕಾಶ ಸಿಕ್ಕರೂ ಕಿಶನ್ಗೆ ಒಂದಂಕಿಯನ್ನು ದಾಟಲು ಸಾಧ್ಯವಾಗುತ್ತಿಲ್ಲ. ಮೊದಲ ಪಂದ್ಯದಲ್ಲಿ ಕೇವಲ 47 ಎಸೆತಗಳಲ್ಲಿ 11 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 106 ರನ್ ಸಿಡಿಸಿದ್ದರು. ಆದರೆ ಆ ಬಳಿಕ ಕಿಶನ್ ಆಡಿರುವ 3 ಪಂದ್ಯಗಳಲ್ಲಿ ಬೇಗನೇ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿದ್ದರೂ ಅವರಿಗೆ ಒಂದಂಕಿ ದಾಟಲು ಸಾಧ್ಯವಾಗಿಲ್ಲ.

ಲಕ್ನೋ ಸೂಪರ್ಜೈಂಟ್ಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ಕೇವಲ 1 ಎಸೆತವನ್ನು ಎದುರಿಸಿದ್ದ ಕಿಶನ್, ಖಾತೆ ತೆರೆಯದೆ ಔಟಾಗಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮೂರನೇ ಪಂದ್ಯದಲ್ಲೂ ಬಹು ಬೇಗನೇ ಬ್ಯಾಟಿಂಗ್ಗೆ ಬಂದಿದ್ದ ಕಿಶನ್ ಕೇವಲ 5 ಎಸೆತಗಳನ್ನು ಎದುರಿಸಿ 2 ರನ್ ಕಲೆಹಾಕಲಷ್ಟೇ ಶಕ್ತರಾಗಿದ್ದರು.

ಇದೀಗ ನಿನ್ನೆ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲೂ ಮೊದಲ ಓವರ್ನಲ್ಲೇ ಬ್ಯಾಟಿಂಗ್ಗೆ ಬಂದಿದ್ದ ಕಿಶನ್ ಐದು ಎಸೆತಗಳನ್ನು ಎದುರಿಸಿ ಮತ್ತೆ 2 ರನ್‌ಗಳಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಹೀಗೆ ಮೊದಲ ಪಂದ್ಯದಲ್ಲಿ ಶತಕದ ಇನ್ನಿಂಗ್ಸ್ ಆಡಿದ ಬಳಿಕ ಉಳಿದ 3 ಪಂದ್ಯಗಳಲ್ಲಿ ಕಿಶನ್ ಬ್ಯಾಟ್ಗೆ ರನ್ ಕಲೆಹಾಕುವುದೇ ಮರೆತು ಹೋಗಿದೆ.
























