ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ ಮುಂಬೈ ಇಂಡಿಯನ್ಸ್ ತಂಡ ತೀರಾ ಕಳಪೆ ಪ್ರದರ್ಶನ ತೋರಿತು. ಆದರೆ, ತಂಡದಲ್ಲಿದ್ದ ಕೆಲ ಆಟಗಾರರು ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಉತ್ತಮ ಪ್ರದರ್ಶನ ತೋರಿದ್ದರು. ಇದರಲ್ಲಿ ಆಲ್ ರೌಂಡರ್ ಆಟಗಾರ ಕುಮಾರ್ ಕಾರ್ತಿಕೇಯ ಕೂಡ ಒಬ್ಬರು. ಇದೀಗ ಇವರು ಸುಮಾರು 9 ವರ್ಷಗಳ ಬಳಿಕ ತಮ್ಮ ಪೋಷಕರನ್ನು ಭೇಟಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್ ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಕ್ರಿಕೆಟ್ ನಲ್ಲಿ ಒಂದು ಹಂತಕ್ಕೆ ತಲುಪಬೇಕು, ದೊಡ್ಡ ಸಾಧನೆ ಮಾಡುಬೇಕು ಎಂಬ ಕಾರಣದಿಂದ ಮನೆಯಿಂದ ದೂರವಿದ್ದು ಕಠಿಣ ಅಭ್ಯಾಸ ನಡೆಸಿದ್ದ ಬೌಲರ್ ಕುಮಾರ ಕಾರ್ತಿಕೇಯ ಬರೋಬ್ಬರಿ 9 ವರ್ಷ 3 ತಿಂಗಳ ಬಳಿಕ ತಮ್ಮ ಮನೆಗೆ ಮರಳಿ ಕುಟುಂಬದ ಸದಸ್ಯರನ್ನು ಭೇಟಿಯಾಗಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದಲ್ಲಿ ಗುರುತಿಸಿಕೊಂಡಿರುವ ಕುಮಾರ್ ಕಾರ್ತಿಕೇಯ ಪ್ರತಿಕ್ರಿಯಿಸಿ, "9 ವರ್ಷ 3 ತಿಂಗಳ ನಂತರ ನನ್ನ ಕುಟುಂಬ ಹಾಗೂ ಅಮ್ಮನನ್ನು ಭೇಟಿಯಾದೆ. ಈ ವೇಳೆ ನನಗಾಗುತ್ತಿರುವ ಸಂತಸದಲ್ಲಿ ಮನದ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ" ಎಂದು ಭಾವುಕ ಟ್ವೀಟ್ ಮಾಡಿದ್ದಾರೆ.
ಉತ್ತರ ಪ್ರದೇಶ ಮೂಲದವರಾದ ಕುಮಾರ ಕಾರ್ತಿಕೇಯ ಅವರು ಸುಮಾರು ಒಂಬತ್ತು ವರ್ಷಗಳ ಹಿಂದೆ ದೆಹಲಿಯಲ್ಲಿ ಕ್ರಿಕೆಟ್ ಅಕಾಡೆಮಿ ಸೇರಿದ್ದರು. ನಂತರ ರಣಜಿ ಕ್ರಿಕೆಟ್ ಗೆ ಮಧ್ಯ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದರು. ಮಧ್ಯ ಪ್ರದೇಶ ತಂಡ ಮೊದಲ ಬಾರಿ ರಣಜಿ ಕಪ್ ಗೆಲ್ಲುವಲ್ಲಿ ಕಾರ್ತಿಕೇಯ ಪ್ರಮುಖ ಪಾತ್ರ ವಹಿಸಿದ್ದರು.
ಕಳೆದ 2021-22ರ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡಿದ 11 ಇನಿಂಗ್ಸ್‌ಗಳಿಂದ ಕುಮಾರ್ ಕಾರ್ತಿಕೇಯ ಅವರು 32 ವಿಕೆಟ್ ಗಳನ್ನು ಕಬಳಿಸಿದ್ದರು. ಆ ಮೂಲಕ ಈ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಗಳನ್ನು ಕಬಳಿಸಿದ ಎರಡನೇ ಬೌಲರ್ ಎನಿಸಿಕೊಂಡಿದ್ದರು. ಇದರೊಂದಿಗೆ ಮಧ್ಯ ಪ್ರದೇಶ ತಂಡ ರಣಜಿ ಟ್ರೋಫಿ ಗೆಲುವಿನಲ್ಲಿ ಕಾರ್ತಿಕೇಯ ಪ್ರಮುಖ ಪಾತ್ರವಹಿಸಿದ್ದರು.
ಜೀವನದಲ್ಲಿ ಏನಾದ್ರೂ ಸಾಧನೆ ಮಾಡಿದ್ರಷ್ಟೇ ಮತ್ತೆ ನಾನು ನಿಮ್ಮನ್ನ ಭೇಟಿ ಮಾಡುತ್ತೇನೆ ಎಂದು ಹೇಳಿ ಹೋಗಿದ್ದ ಕಾರ್ತಿಕೇಯ ಐಪಿಎಲ್ 2022ರ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಚೊಚ್ಚಲ ಪಂದ್ಯವನ್ನಾಡಲುವ ಮೂಲಕ ಪ್ರಮುಖ ಟೂರ್ನಿಯಲ್ಲಿ ಕಾಣಿಸಿಕೊಂಡರು.
"ನಾನು 9 ವರ್ಷಗಳಿಂದ ಮನೆಗೆ ಬಂದಿಲ್ಲ. ನಾನು ಜೀವನದಲ್ಲಿ ಏನನ್ನಾದರೂ ಸಾಧಿಸಿದಾಗ ಮಾತ್ರ ಮನೆಗೆ ಮರಳಲು ನಿರ್ಧರಿಸಿದೆ. ನನ್ನ ತಾಯಿ ಮತ್ತು ತಂದೆ ನನ್ನನ್ನು ಆಗಾಗ್ಗೆ ಕರೆದರು, ಆದರೆ ನಾನು ಬದ್ಧನಾಗಿದ್ದೆ. ಈಗ, ಅಂತಿಮವಾಗಿ, ನಾನು ಐಪಿಎಲ್ ನಂತರ ಮನೆಗೆ ಮರಳಿದ್ದೇನೆ'' ಎಂದು ಕಾರ್ತಿಕೇಯ ಹೆತ್ತವರೊಂದಿಗೆ ಸೇರಿದ ಬಳಿಕ ಮಾತನಾಡಿದ್ದಾರೆ.
2022ರ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಕಣಕ್ಕಿಳಿದಿದ್ದ ಕಾರ್ತಿಕೇಯ ತಾವು ಆಡಿರುವ 4 ಪಂದ್ಯಗಳಿಂದ 5 ವಿಕೆಟ್ ಪಡೆದುಕೊಂಡಿದ್ದರು. ಈ ಪ್ಲೇಯರ್ ಇದೀಗ ಮಧ್ಯಪ್ರದೇಶ ರಣಜಿ ಟ್ರೋಫಿ ತಂಡದಲ್ಲಿ ಆಡುತ್ತಿದ್ದು, ತಂಡ ಪ್ರಸಕ್ತ ಋತುವಿನಲ್ಲಿ ಚಾಂಪಿಯನ್ ಆಗಿದೆ. ಕಾರ್ತಿಕೇಯ 11 ಪಂದ್ಯಗಳಿಂದ 32 ವಿಕೆಟ್ ಸಾಧನೆ ಮಾಡಿದ್ದಾರೆ.
Published On - 9:33 am, Fri, 5 August 22