Narendra Modi Stadium: ಗಿನ್ನೆಸ್ ವರ್ಲ್ಡ್ ರೆಕಾರ್ಡ್ ನಿರ್ಮಿಸಿದ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ
TV9 Web | Updated By: ಝಾಹಿರ್ ಯೂಸುಫ್
Updated on:
Nov 27, 2022 | 6:51 PM
Narendra Modi Stadium: ಐಪಿಎಲ್ ಸೀಸನ್-15 ರ ಫೈನಲ್ ಪಂದ್ಯವು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿತ್ತು. ಅಂತಿಮ ಹಣಾಹಣಿಯಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಿತ್ತು.
1 / 7
ಅಹಮದಾಬಾದ್ನಲ್ಲಿನ ನರೇಂದ್ರ ಮೋದಿ ಸ್ಟೇಡಿಯಂ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ಸ್ಥಾನ ಪಡೆದಿದೆ. 2022ರ ಐಪಿಎಲ್ ಫೈನಲ್ ಪಂದ್ಯದ ವೇಳೆ ಅತ್ಯಧಿಕ ಪ್ರೇಕ್ಷಕರ ಹಾಜರಾತಿಗಾಗಿ ಈ ಸ್ಟೇಡಿಯಂ ಗಿನ್ನೆಸ್ ದಾಖಲೆ ಪುಟಗಳಲ್ಲಿ ಸ್ಥಾನ ಪಡೆದಿರುವುದು ವಿಶೇಷ.
2 / 7
ಐಪಿಎಲ್ ಸೀಸನ್-15 ರ ಫೈನಲ್ ಪಂದ್ಯವು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿತ್ತು. ಅಂತಿಮ ಹಣಾಹಣಿಯಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಿತ್ತು. ಈ ವೇಳೆ ಪಂದ್ಯ ವೀಕ್ಷಣೆಗೆ ಸ್ಟೇಡಿಯಂನಲ್ಲಿ ಬರೋಬ್ಬರಿ 101,566 ಜನರು ನೆರೆದಿದ್ದರು. ಇದರೊಂದಿಗೆ ಟಿ20 ಕ್ರಿಕೆಟ್ ಪಂದ್ಯವೊಂದರ ವೀಕ್ಷಣೆಗೆ ಅತ್ಯಧಿಕ ಪ್ರೇಕ್ಷಕರು ಸೇರಿದ ಕ್ರಿಕೆಟ್ ಸ್ಟೇಡಿಯಂ ಎಂಬ ವಿಶ್ವ ದಾಖಲೆ ನರೇಂದ್ರ ಮೋದಿ ಸ್ಟೇಡಿಯಂ ಪಾಲಾಗಿದೆ.
3 / 7
ಈ ವಿಶೇಷ ವಿಶ್ವ ದಾಖಲೆಯ ಮಾಹಿತಿಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಮೇ 29, 2022 ರಂದು ಭವ್ಯವಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 101,566 ಜನರು ಐಪಿಎಲ್ ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಿದ್ದರು. ಇದೀಗ T20 ಪಂದ್ಯವೊಂದರಲ್ಲಿ ಅತಿ ಹೆಚ್ಚು ಪ್ರೇಕ್ಷಕರ ಹಾಜರಾತಿಗಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ವೀಕರಿಸಲು ತುಂಬಾ ಸಂತೋಷವಾಗಿದೆ ಮತ್ತು ಹೆಮ್ಮೆಯಿದೆ. ಇದನ್ನು ಸಾಧ್ಯವಾಗಿಸಿದ್ದಕ್ಕಾಗಿ ನಮ್ಮ ಅಭಿಮಾನಿಗಳಿಗೆ ದೊಡ್ಡ ಧನ್ಯವಾದಗಳು ಎಂದು ಜಯ್ ಶಾ ತಿಳಿಸಿದ್ದಾರೆ.
4 / 7
63 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಕ್ರೀಡಾಂಗಣದಲ್ಲಿ ಒಂದು ಲಕ್ಷ 10 ಸಾವಿರ ಪ್ರೇಕ್ಷಕರು ಕುಳಿತುಕೊಳ್ಳಬಹುದಾಗಿದೆ. ಈ ಮೂಲಕ ಅತೀ ದೊಡ್ಡ ಕ್ರಿಕೆಟ್ ಮೈದಾನ ಎಂಬ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಸ್ಡೇಡಿಯಂ (90 ಸಾವಿರ ಪ್ರೇಕ್ಷಕರು) ನ ದಾಖಲೆಯನ್ನು ಕೂಡ ನರೇಂದ್ರ ಮೋದಿ ಕ್ರೀಡಾಂಗಣ ಮುರಿದಿದೆ.
5 / 7
ಇನ್ನು ಈ ಮೈದಾನವು ನಾಲ್ಕು ಡ್ರೆಸ್ಸಿಂಗ್ ಕೊಠಡಿಗಳನ್ನು ಹೊಂದಿರುವ ಏಕೈಕ ಕ್ರಿಕೆಟ್ ಕ್ರೀಡಾಂಗಣವಾಗಿದೆ. ಇದಲ್ಲದೆ ಕ್ರಿಕೆಟ್ ಅಕಾಡೆಮಿಗಳು, ಒಳಾಂಗಣ ಅಭ್ಯಾಸ ಪಿಚ್‌ಗಳು ಮತ್ತು ಎರಡು ಪ್ರತ್ಯೇಕ ಅಭ್ಯಾಸ ಮೈದಾನಗಳಿವೆ. ಡ್ರೆಸ್ಸಿಂಗ್ ಕೊಠಡಿಯಿಂದ ಮೈದಾನಕ್ಕೆ ತಲುಪಲು ಆಟಗಾರರು 80 ಮೆಟ್ಟಿಲುಗಳನ್ನು ಇಳಿಯಬೇಕು ಎಂದರೆ ಈ ಮೈದಾನವು ಎಷ್ಟು ದೊಡ್ಡದು ಎಂದು ಅಂದಾಜಿಸಬಹುದು.
6 / 7
800 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಕ್ರೀಡಾಂಗಣದಲ್ಲಿ ಎರಡು ಅಭ್ಯಾಸ ಮೈದಾನಗಳಿವೆ. ಇದಲ್ಲದೆ ಕೆಂಪು ಮತ್ತು ಕಪ್ಪು ಮಣ್ಣಿನಿಂದ ಮಾಡಿದ 11 ವಿಭಿನ್ನ ಪಿಚ್‌ಗಳನ್ನು ಕೂಡ ಇಲ್ಲಿ ನಿರ್ಮಿಸಲಾಗಿದೆ.
7 / 7
ಹಾಗೆಯೇ ಕ್ರೀಡಾಂಗಣದ ಕ್ಲಬ್ ಹೌಸ್ 55 ಕೊಠಡಿಗಳನ್ನು ಹೊಂದಿದೆ. 3ಡಿ ಮಿನಿ ಥಿಯೇಟರ್ ಸಹ ಇದರಲ್ಲಿದೆ. ಒಲಿಂಪಿಕ್ ಗಾತ್ರದ ಈಜುಕೊಳ, ಸೌರ ಸ್ನಾನದ ವ್ಯವಸ್ಥೆಯನ್ನೂ ಇಲ್ಲಿ ಮಾಡಲಾಗಿದೆ. ಇದಲ್ಲದೆ ಒಳಾಂಗಣ ಕ್ರೀಡೆಗಳಿಗಾಗಿ ಸ್ಕ್ವ್ಯಾಷ್ ಕೋರ್ಟ್ಗಳಿದ್ದು, ಆಟಗಾರರಿಗಾಗಿ ವಿಶೇಷ ಡ್ರೆಸ್ಸಿಂಗ್ ಕೊಠಡಿ ಹಾಗೂ ಜಿಮ್ಗಳನ್ನು ಸಿದ್ಧಪಡಿಸಲಾಗಿದೆ. ಈ ಮೂಲಕ ವಿಶ್ವದ ಅತ್ಯಂತ ಸುಸಜ್ಜಿತ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆಯನ್ನು ನರೇಂದ್ರ ಮೋದಿ ಸ್ಟೇಡಿಯಂ ಹೊಂದಿದೆ.
Published On - 6:32 pm, Sun, 27 November 22