ಟೀಮ್ ಇಂಡಿಯಾ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಶುಕ್ರವಾರ ಮುಂಜಾನೆ ತಮ್ಮ ಮರ್ಸಿಡಿಸ್ ಕಾರಿನಲ್ಲಿ ದೆಹಲಿಯಿಂದ ರೂರ್ಕಿಗೆ ಹೋಗುತ್ತಿದ್ದ ಸಂದರ್ಭ ಭೀಕರ ಕಾರು ಅಪಘಾತ ಸಂಭವಿಸಿ ಡೆಹ್ರಾಡೂನ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅದೃಷ್ಟವಶಾತ್ ಪಂತ್ ಅಪಾಯದಿಂದ ಪಾರಾಗಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಆದರೂ ಅವರು ಕೆಲವು ಪರೀಕ್ಷೆಗಳಿಗೆ ಒಳಗಾಗಬೇಕಿದೆ. ಪಂತ್ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ. ಈ ವಿಚಾರವನ್ನು ಪಂತ್ ತಾಯಿ ಮತ್ತು ಕುಟುಂಬದ ಮೂಲಗಳು ತಿಳಿಸಿವೆ. ಪಂತ್ ಅವರನ್ನು ಭೇಟಿಯಾದ ಕುಟುಂಬದ ಸದಸ್ಯರು ಮತ್ತು ಗೆಳೆಯರು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದಿದ್ದಾರೆ.
ಮೊದಲ ದಿನಕ್ಕೆ ಹೋಲಿಸಿದರೆ ಪಂತ್ ಅವರು ಚೇತರಿಸಿಕೊಂಡಿದ್ದಾರೆ. ಕಳೆದ ಎರಡೂವರೆ ದಿನದಲ್ಲಿ ಪಂತ್ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡುಬಂದಿದೆ. ಆದ್ದರಿಂದ ಸದ್ಯಕ್ಕೆ ಅವರನ್ನು ಬೇರೆ ಆಸ್ಪತ್ರೆಗೆ ದಾಖಲಿಸುವ ಯೋಚನೆ ಇಲ್ಲ ಎಂದು ಪಂತ್ ಕುಟುಂಬದ ಗೆಳೆಯರಾದ ಉಮೇಶ್ ಕುಮಾರ್ ತಿಳಿಸಿದ್ದಾರೆ.
ಪಂತ್ ಅವರನ್ನು ಭೇಟಿಯಾದ ನಂತರ ಹೇಳಿಕೆ ನೀಡಿರುವ ಡಿಡಿಸಿಎ ನಿರ್ದೇಶಕ ಶ್ಯಾಮ್ ಶರ್ಮಾ, ”ಪಂತ್ ಅವರ ಆರೋಗ್ಯ ಸ್ಥಿರವಾಗಿದೆ. ಅಲ್ಲದೆ ಪಂತ್ ಚೇತರಿಸಿಕೊಳ್ಳುತ್ತಿದ್ದಾರೆ. ನಮ್ಮ ಬಿಸಿಸಿಐ ವೈದ್ಯರು ಇಲ್ಲಿನ ವೈದ್ಯರೊಂದಿಗೆ ಸಂಪರ್ಕದಲ್ಲಿದ್ದಾರೆ. ಜೈ ಷಾ ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದಾರೆ. ಸದ್ಯಕ್ಕೆ ಪಂತ್ಗೆ ಇಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ,” ಎಂದು ಹೇಳಿದ್ದಾರೆ.
ಮೊಣಕಾಲಿನ ನೋವು ಅಪಘಾತದಿಂದ ಹೆಚ್ಚಾಗಿದೆ. ಪಂತ್ ಗಾಯದ ಪ್ರಮಾಣ ಅಧಿಕವಾಗಿರುವ ಕಾರಣ ಕ್ರಿಕೆಟ್ನಿಂದ ಕನಿಷ್ಠ ಎಂಟು ತಿಂಗಳುಗಳ ಕಾಲ ದೂರವಿರಬೇಕಾಗಬಹುದು ಎನ್ನಲಾಗಿದೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಸೇರಿದಂತೆ ಐಪಿಎಲ್ 2023 ರಿಂದ ಬಹುತೇಕ ಹೊರಗುಳಿಯಲಿದ್ದಾರೆ.
ಇದರ ನಡುವೆ ಪಂತ್ ಅವರ ಜೀವ ಉಳಿಸಲು ನೆರವಾದ ಹರ್ಯಾಣ ರೋಡ್‌ವೇಸ್‌ನ ಚಾಲಕ ಸುನೀಲ್ ಕುಮಾರ್ ಮತ್ತು ಕಂಡಕ್ಟರ್ ಪರಂಜೀತ್ ಅವರನ್ನು ಇದೇ ಜನವರಿ 26 ರಂದು ಅಂದರೆ ಗಣರಾಜ್ಯೋತ್ಸವದಂದು ನಮ್ಮ ಸರ್ಕಾರ ಸನ್ಮಾನಿಸಲಿದೆ ಎಂದು ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.
Published On - 8:13 am, Mon, 2 January 23