ಟಿ20 ವಿಶ್ವಕಪ್ ಹಾಗೂ ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆದ ಆಟಗಾರರ ಪಟ್ಟಿ ಇಲ್ಲಿದೆ
Asia Cup 2025 India Squad: ಏಷ್ಯಾಕಪ್ ಟೂರ್ನಿಗೆ 15 ಸದಸ್ಯರುಗಳ ಟೀಮ್ ಇಂಡಿಯಾವನ್ನು ಹೆಸರಿಸಲಾಗಿದೆ. 15 ಸದಸ್ಯರುಗಳಲ್ಲಿ 2024 ರಲ್ಲಿ ಟಿ20 ವಿಶ್ವಕಪ್ ಆಡಿದ 8 ಆಟಗಾರರು ಕಾಣಿಸಿಕೊಂಡಿರುವುದು ವಿಶೇಷ. ಅಂದರೆ ಟಿ20 ವಿಶ್ವಕಪ್ ಹಾಗೂ ಏಷ್ಯಾಕಪ್ ತಂಡಗಳಲ್ಲಿ ಸ್ಥಾನ ಪಡೆಯುವಲ್ಲಿ ಎಂಟು ಆಟಗಾರರು ಯಶಸ್ವಿಯಾಗಿದ್ದಾರೆ.
Updated on:Aug 21, 2025 | 10:25 AM

ಟಿ20 ವಿಶ್ವಕಪ್ 2024 ರಲ್ಲಿ ಭಾರತ ತಂಡದ ಪರ ಕಾಣಿಸಿಕೊಂಡ 8 ಆಟಗಾರರು ಮಾತ್ರ ಈ ಬಾರಿಯ ಏಷ್ಯಾಕಪ್ಗೆ ಆಯ್ಕೆಯಾಗಿದ್ದಾರೆ. ಅಂದರೆ 15 ಸದಸ್ಯರುಗಳಲ್ಲಿ 7 ಮಂದಿಗೆ ಈ ಬಾರಿಯ ಏಷ್ಯಾಕಪ್ ತಂಡದಲ್ಲಿ ಸ್ಥಾನ ಲಭಿಸಿಲ್ಲ. ಅದರಂತೆ ಭಾರತ ಟಿ20 ವಿಶ್ವಕಪ್ ತಂಡ ಹಾಗೂ ಏಷ್ಯಾಕಪ್ 2025ರ ತಂಡಗಳಲ್ಲಿ ಸ್ಥಾನ ಪಡೆದಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

ಸೂರ್ಯಕುಮಾರ್ ಯಾದವ್: 2024ರ ಟಿ20 ವಿಶ್ವಕಪ್ನಲ್ಲಿ ಸೂರ್ಯಕುಮಾರ್ ಯಾದವ್ 8 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಈ ವೇಳೆ 199 ರನ್ ಕಲೆಹಾಕುವ ಮೂಲಕ ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಏಷ್ಯಾಕಪ್ಗೆ ಭಾರತ ತಂಡದ ನಾಯಕನಾಗಿ ಸೂರ್ಯಕುಮಾರ್ ಯಾದವ್ ಆಯ್ಕೆಯಾಗಿದ್ದಾರೆ.

ಶಿವಂ ದುಬೆ: ಟಿ20 ವಿಶ್ವಕಪ್ನಲ್ಲಿ ಭಾರತದ ಪರ ಆಲ್ರೌಂಡರ್ ಆಗಿ ಕಾಣಿಸಿಕೊಂಡಿದ್ದ ಶಿವಂ ದುಬೆ 8 ಇನಿಂಗ್ಸ್ಗಳ ಮೂಲಕ ಒಟ್ಟು 133 ರನ್ ಕಲೆಹಾಕಿದ್ದರು. ಇದೀಗ ಏಷ್ಯಾಕಪ್ಗೂ ಆಲ್ರೌಂಡರ್ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಎಡಗೈ ದಾಂಡಿಗ ಶಿವಂ ದುಬೆ ಯಶಸ್ವಿಯಾಗಿದ್ದಾರೆ.

ಸಂಜು ಸ್ಯಾಮ್ಸನ್: 2024ರ ಟಿ20 ವಿಶ್ವಕಪ್ನಲ್ಲಿ ಎರಡನೇ ವಿಕೆಟ್ ಕೀಪರ್ ಆಗಿ ಸಂಜು ಸ್ಯಾಮ್ಸನ್ ಆಯ್ಕೆಯಾಗಿದ್ದರು. ಇದಾಗ್ಯೂ ಅವರಿಗೆ ಒಂದೇ ಒಂದು ಪಂದ್ಯದಲ್ಲಿ ಚಾನ್ಸ್ ಸಿಕ್ಕಿರಲಿಲ್ಲ. ಇದೀಗ ಏಷ್ಯಾಕಪ್ ತಂಡಕ್ಕೆ ಮುಖ್ಯ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ. ಈ ಬಾರಿ ಈ ಬಾರಿಯ ಏಷ್ಯಾಕಪ್ನಲ್ಲಿ ಸ್ಯಾಮ್ಸನ್ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.

ಹಾರ್ದಿಕ್ ಪಾಂಡ್ಯ; ಟಿ20 ವಿಶ್ವಕಪ್ ಗೆಲುವಿನ ರೂವಾರಿಗಳಲ್ಲಿ ಒಬ್ಬೆರೆನಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಕೂಡ ಈ ಬಾರಿಯ ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 2024ರ ವಿಶ್ವಕಪ್ನಲ್ಲಿ ಬ್ಯಾಟಿಂಗ್ನಲ್ಲಿ 144 ರನ್ಗಳ ಕೊಡುಗೆ ನೀಡಿದ್ದ ಪಾಂಡ್ಯ ಬೌಲಿಂಗ್ನಲ್ಲಿ 11 ವಿಕೆಟ್ ಕಬಳಿಸಿದ್ದರು. ಹೀಗಾಗಿ ಈ ಬಾರಿ ಕೂಡ ಹಾರ್ದಿಕ್ ಕಡೆಯಿಂದ ಆಲ್ರೌಂಡರ್ ಪ್ರದರ್ಶನವನ್ನು ನಿರೀಕ್ಷಿಸಬಹುದು.

ಅಕ್ಷರ್ ಪಟೇಲ್: ಏಷ್ಯಾಕಪ್ ತಂಡದಲ್ಲಿ ಸ್ಪಿನ್ ಆಲ್ರೌಂಡರ್ ಆಗಿ ಆಯ್ಕೆಯಾಗಿರುವ ಅಕ್ಷರ್ ಪಟೇಲ್ ಕೂಡ ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿದಿದ್ದರು. 8 ಪಂದ್ಯಗಳಿಂದ 9 ವಿಕೆಟ್ ಪಡೆದಿದ್ದ ಅಕ್ಷರ್ ಬ್ಯಾಟಿಂಗ್ ಮೂಲಕ 92 ರನ್ಗಳ ಕೊಡುಗೆ ನೀಡಿದ್ದರು. ಹೀಗಾಗಿ ಏಷ್ಯಾಕಪ್ನಲ್ಲೂ ಅಕ್ಷರ್ ಪಟೇಲ್ ಕಡೆಯಿಂದ ಉತ್ತಮ ಪ್ರದರ್ಶನವನ್ನು ಎದುರು ನೋಡಬಹುದು.

ಕುಲ್ದೀಪ್ ಯಾದವ್: 2024ರ ಟಿ20 ವಿಶ್ವಕಪ್ನಲ್ಲಿ ಸ್ಪಿನ್ನರ್ ಕುಲ್ದೀಪ್ ಯಾದವ್ ಒಟ್ಟು 5 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಈ ವೇಳೆ 10 ವಿಕೆಟ್ ಕಬಳಿಸುವ ಮೂಲಕ ಮಿಂಚಿದ್ದರು. ಇದೀಗ ಏಷ್ಯಾಕಪ್ಗೆ ಆಯ್ಕೆ ಮಾಡಲಾದ ತಂಡದಲ್ಲೂ ಅನುಭವಿ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್ ಸ್ಥಾನ ಪಡೆದಿದ್ದಾರೆ.

ಜಸ್ಪ್ರೀತ್ ಬುಮ್ರಾ: ಟಿ20 ವಿಶ್ವಕಪ್ ಫೈನಲ್ ಪಂದ್ಯದ ಗೆಲುವಿನ ರೂವಾರಿ ಜಸ್ಪ್ರೀತ್ ಬುಮ್ರಾ ಸಹ ಏಷ್ಯಾಕಪ್ ಮೂಲಕ ಟಿ20 ಕ್ರಿಕೆಟ್ಗೆ ಮರಳುತ್ತಿದ್ದಾರೆ. ಅಂದರೆ 2024ರ ಟಿ20 ವಿಶ್ವಕಪ್ನಲ್ಲಿ 8 ಪಂದ್ಯಗಳಿಂದ 15 ವಿಕೆಟ್ ಕಬಳಿಸಿ ಮಿಂಚಿದ್ದ ಬುಮ್ರಾ ಆ ಬಳಿಕ ಭಾರತದ ಪರ ಟಿ20 ಪಂದ್ಯವಾಡಿರಲಿಲ್ಲ. ಇದೀಗ ಏಷ್ಯಾಕಪ್ ಮೂಲಕ ಮತ್ತೆ ಚುಟುಕು ಕ್ರಿಕೆಟ್ನಲ್ಲಿ ಕಣಕ್ಕಿಳಿಯಲು ಸಜ್ಜಾಗುತ್ತಿದ್ದಾರೆ.

ಅರ್ಷದೀಪ್ ಸಿಂಗ್: ಟಿ20 ವಿಶ್ವಕಪ್ 2024 ರಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ವಿಕೆಟ್ ಕಬಳಿಸಿದ ಬೌಲರ್ ಅರ್ಷದೀಪ್ ಸಿಂಗ್. 8 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿದ್ದ ಅರ್ಷದೀಪ್ ಒಟ್ಟು 17 ವಿಕೆಟ್ ಪಡೆದು ಮಿಂಚಿದ್ದರು. ಇದೀಗ ಏಷ್ಯಾಕಪ್ ತಂಡದಲ್ಲೂ ಪ್ರಮುಖ ವೇಗಿಯಾಗಿ ಅರ್ಷದೀಪ್ ಸಿಂಗ್ ಸ್ಥಾನ ಪಡೆದಿದ್ದಾರೆ.

ಟಿ20 ವಿಶ್ವಕಪ್ 2024 ಭಾರತ ತಂಡ : ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್ ) , ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್ ) , ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.

ಏಷ್ಯಾ ಕಪ್ಗೆ ಭಾರತ ತಂಡ: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ರಿಂಕು ಸಿಂಗ್.
Published On - 10:24 am, Thu, 21 August 25
