- Kannada News Photo gallery Cricket photos players who have been excluded from last year's BCCI Central Contract list
Team India: ಬಿಸಿಸಿಐ ವಾರ್ಷಿಕ ಒಪ್ಪಂದದಿಂದ ಹೊರಬಿದ್ದ 7 ಆಟಗಾರರು
BCCI Central Contract: ಬಿಸಿಸಿಐ ಪ್ರಕಟಿಸಿರುವ ವಾರ್ಷಿಕ ಗುತ್ತಿಗೆ ಒಪ್ಪಂದ ಪಟ್ಟಿಯಿಂದ 7 ಆಟಗಾರರು ಹೊರಬಿದ್ದಿದ್ದಾರೆ. ಅಂದರೆ ಕಳೆದ ವರ್ಷ ವಾರ್ಷಿಕ ವೇತನ ಪಡೆದ ಈ ಆಟಗಾರರನ್ನು ಈ ಬಾರಿ ಗುತ್ತಿಗೆ ಒಪ್ಪಂದಕ್ಕೆ ಪರಿಗಣಿಸಲಾಗಿಲ್ಲ ಎಂಬುದು ವಿಶೇಷ. ಆ ಆಟಗಾರರು ಯಾರೆಲ್ಲಾ, ಕಳೆದ ಬಾರಿ ಎಷ್ಟು ವೇತನ ಪಡೆದಿದ್ದರು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
Updated on: Feb 29, 2024 | 9:38 AM

ಭಾರತೀಯ ಕ್ರಿಕೆಟ್ ಮಂಡಳಿ ತನ್ನ ಆಟಗಾರರೊಂದಿಗಿನ ವಾರ್ಷಿಕ ಒಪ್ಪಂದವನ್ನು ಪ್ರಕಟಿಸಿದೆ. ಈ ಬಾರಿ ಒಟ್ಟು 30 ಆಟಗಾರರೊಂದಿಗೆ ಬಿಸಿಸಿಐ ಗುತ್ತಿಗೆ ಒಪ್ಪಂದ ಮಾಡಿಕೊಂಡಿದೆ. ಈ ಪಟ್ಟಿಯಲ್ಲಿ 11 ಹೊಸ ಆಟಗಾರರು ಕಾಣಿಸಿಕೊಂಡಿರುವುದು ವಿಶೇಷ. ಇದೇ ವೇಳೆ 7 ಆಟಗಾರರು ಒಪ್ಪಂದ ಪಟ್ಟಿಯಿಂದ ಹೊರಬಿದ್ದಿದ್ದಾರೆ.

ಅಂದರೆ 2022-23 ರ ಬಿಸಿಸಿಐ ಗುತ್ತಿಗೆ ಒಪ್ಪಂದ ಪಡೆದಿದ್ದ 7 ಆಟಗಾರರನ್ನು ಈ ಬಾರಿ ಕೈ ಬಿಡಲಾಗಿದೆ. ಆ ಆಟಗಾರರು ಯಾರೆಲ್ಲಾ, ಕಳೆದ ಬಾರಿ ವಾರ್ಷಿಕವಾಗಿ ಅವರು ಪಡೆದಿರುವ ಮೊತ್ತವೆಷ್ಟು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ...

ಚೇತೇಶ್ವರ ಪೂಜಾರ: ಭಾರತ ಟೆಸ್ಟ್ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದ ಚೇತೇಶ್ವರ ಪೂಜಾರ ಅವರನ್ನು ಈ ಬಾರಿ ಗುತ್ತಿಗೆ ಒಪ್ಪಂದಕ್ಕೆ ಪರಿಗಣಿಸಲಾಗಿಲ್ಲ. ಇದೇ ಪೂಜಾರ ಕಳೆದ ವರ್ಷ ಬಿ ಗ್ರೇಡ್ನಲ್ಲಿ ಕಾಣಿಸಿಕೊಂಡಿದ್ದರು. ಆ ಮೂಲಕ ವಾರ್ಷಿಕ 3 ಕೋಟಿ ರೂ. ಸಂಭಾವನೆ ಪಡೆದಿದ್ದರು.

ಶ್ರೇಯಸ್ ಅಯ್ಯರ್: 2022-23 ರ ಗುತ್ತಿಗೆ ಒಪ್ಪಂದದಲ್ಲಿ ಬಿ ಗ್ರೇಡ್ನಲ್ಲಿ ಕಾಣಿಸಿಕೊಂಡಿದ್ದ ಶ್ರೇಯಸ್ ಅಯ್ಯರ್ 3 ಕೋಟಿ ರೂ. ಸಂಭಾವನೆ ಪಡೆದಿದ್ದರು. ಆದರೆ ಈ ಬಾರಿ ಅವರನ್ನು ಈ ಬಾರಿ ಕೈ ಬಿಡಲಾಗಿದೆ.

ಉಮೇಶ್ ಯಾದವ್: ಕಳೆದ ವರ್ಷ ಉಮೇಶ್ ಯಾದವ್ ಅವರು ಸಿ ಗ್ರೇಡ್ ಒಪ್ಪಂದ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಅದರಂತೆ ವಾರ್ಷಿಕ 1 ಕೋಟಿ ರೂ. ಸಂಭಾವನೆ ಪಡೆದಿದ್ದ ಹಿರಿಯ ವೇಗಿಯನ್ನು ಈ ಬಾರಿ ಬಿಸಿಸಿಐ ಕೈ ಬಿಟ್ಟಿದೆ.

ಇಶಾನ್ ಕಿಶನ್: ಟೀಮ್ ಇಂಡಿಯಾದ ಯುವ ಎಡಗೈ ದಾಂಡಿಗ ಇಶಾನ್ ಕಿಶನ್ ಕಳೆದ ವರ್ಷ 1 ಕೋಟಿ ಸಂಭಾವನೆಯ ಗ್ರೇಡ್ ಸಿ ಒಪ್ಪಂದ ಪಟ್ಟಿಯಲ್ಲಿದ್ದರು. ಆದರೆ ಈ ಬಾರಿ ಅವರನ್ನು ಕೇಂದ್ರೀಯ ಗುತ್ತಿಗೆ ಒಪ್ಪಂದಕ್ಕೆ ಪರಿಗಣಿಸಲಾಗಿಲ್ಲ.

ಶಿಖರ್ ಧವನ್: ಕಳೆದ ವರ್ಷ ಗ್ರೇಡ್ ಸಿ (1 ಕೋಟಿ ರೂ.) ಒಪ್ಪಂದ ಪಟ್ಟಿಯಲ್ಲಿದ್ದ ಶಿಖರ್ ಧವನ್ ಅವರನ್ನೂ ಸಹ ಈ ಬಾರಿ ಕೈ ಬಿಡಲಾಗಿದೆ. ಇದರೊಂದಿಗೆ ಟೀಮ್ ಇಂಡಿಯಾದಲ್ಲಿ ಧವನ್ ಅವರ ಯುಗಾಂತ್ಯವಾಗಿದೆ ಎಂದೇ ಹೇಳಬಹುದು.

ದೀಪಕ್ ಹೂಡಾ: 2022-23 ರ ಒಪ್ಪಂದ ಪಟ್ಟಿಯಲ್ಲಿ ಟೀಮ್ ಇಂಡಿಯಾ ಆಲ್ರೌಂಡರ್ ದೀಪಕ್ ಹೂಡಾ ಗ್ರೇಡ್-ಸಿ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಅದರಂತೆ 1 ಕೋಟಿ ರೂ. ಸಂಭಾವನೆ ಪಡೆದಿದ್ದ ಹೂಡಾ ಅವರನ್ನು ಈ ಬಾರಿ ಕೈ ಬಿಡಲಾಗಿದೆ.

ಯುಜ್ವೇಂದ್ರ ಚಹಲ್: ಕಳೆದ ವರ್ಷ 1 ಕೋಟಿ ರೂ. ಸಂಭಾವನೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಟೀಮ್ ಇಂಡಿಯಾ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರನ್ನು ಈ ಬಾರಿ ಗ್ರೇಡ್ ಸಿ ಒಪ್ಪಂದಕ್ಕೂ ಪರಿಗಣಿಸಲಾಗಿಲ್ಲ ಎಂಬುದೇ ಅಚ್ಚರಿ.
