ಟೀಮ್ ಇಂಡಿಯಾದಿಂದ 6 ಆಟಗಾರರು ಔಟ್..!
India Squad For Asia Cup 2025: ಸೆಪ್ಟೆಂಬರ್ 9 ರಿಂದ ಶುರುವಾಗಲಿರುವ ಏಷ್ಯಾಕಪ್ ಟೂರ್ನಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದು, ಉಪನಾಯಕನಾಗಿ ಶುಭ್ಮನ್ ಗಿಲ್ ಆಯ್ಕೆಯಾಗಿದ್ದಾರೆ. ಅದರಂತೆ ಏಷ್ಯಾಕಪ್ಗೆ ಆಯ್ಕೆಯಾದ ಭಾರತ ತಂಡ ಈ ಕೆಳಗಿನಂತಿದೆ...
Updated on: Aug 19, 2025 | 3:23 PM

ಏಷ್ಯಾಕಪ್ಗಾಗಿ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ಹದಿನೈದು ಸದಸ್ಯರುಗಳಲ್ಲಿ 2024 ರ ಟಿ20 ವಿಶ್ವಕಪ್ನಲ್ಲಿ ಕಾಣಿಸಿಕೊಂಡಿದ್ದ 6 ಆಟಗಾರರು ಸ್ಥಾನ ಪಡೆದಿಲ್ಲ ಎಂಬುದು ವಿಶೇಷ. ಹಾಗಿದ್ರೆ ಕಳೆದ ವರ್ಷ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದು, ಈ ಬಾರಿ ಹೊರಬಿದ್ದಿರುವ ಆಟಗಾರರು ಯಾರೆಲ್ಲಾ ಎಂದು ನೋಡೋಣ...

ರೋಹಿತ್ ಶರ್ಮಾ: 2024ರ ಟಿ20 ವಿಶ್ವಕಪ್ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದು ರೋಹಿತ್ ಶರ್ಮಾ. ಆದರೆ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದ ಬೆನ್ನಲ್ಲೇ ಹಿಟ್ಮ್ಯಾನ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಹೀಗಾಗಿ ಈ ಬಾರಿಯ ಏಷ್ಯಾಕಪ್ ತಂಡದ ಆಯ್ಕೆಗೆ ರೋಹಿತ್ ಶರ್ಮಾ ಅವರನ್ನು ಪರಿಗಣಿಸಲಾಗಿಲ್ಲ.

ವಿರಾಟ್ ಕೊಹ್ಲಿ: ಟಿ20 ವಿಶ್ವಕಪ್ 2024 ರಲ್ಲಿ ಫೈನಲ್ ಪಂದ್ಯದ ಬೆನ್ನಲ್ಲೇ ವಿರಾಟ್ ಕೊಹ್ಲಿ ಕೂಡ ಚುಟುಕು ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದರು. ಇತ್ತ ಈ ಬಾರಿ ಏಷ್ಯಾಕಪ್ ನಡೆಯುವುದು ಟಿ20 ಸ್ವರೂಪದಲ್ಲಿ. ಹೀಗಾಗಿ ಮುಂಬರುವ ಏಷ್ಯಾಕಪ್ ಟೂರ್ನಿಯಲ್ಲಿ ಕಿಂಗ್ ಕೊಹ್ಲಿ ಕಾಣಿಸಿಕೊಳ್ಳುವುದಿಲ್ಲ.

ರವೀಂದ್ರ ಜಡೇಜಾ: ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ನಿವೃತ್ತಿ ಘೋಷಿಸಿದ ಮೂರನೇ ಆಟಗಾರ ರವೀಂದ್ರ ಜಡೇಜಾ. ಚುಟುಕು ಕ್ರಿಕೆಟ್ಗೆ ಗುಡ್ ಬೈ ಹೇಳಿರುವ ಜಡೇಜಾ ಇದೀಗ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ನತ್ತ ಫೋಕಸ್ ಮಾಡಿದ್ದಾರೆ. ಹೀಗಾಗಿ ಅವರನ್ನೂ ಸಹ ಏಷ್ಯಾಕಪ್ ತಂಡಕ್ಕೆ ಆಯ್ಕೆಗೆ ಪರಿಗಣಿಸಲಾಗಿಲ್ಲ.

ಯುಜ್ವೇಂದ್ರ ಚಹಲ್: 2024ರ ಟಿ20 ವಿಶ್ವಕಪ್ನಲ್ಲಿ ಯುಜ್ವೇಂದ್ರ ಚಹಲ್ ಸ್ಪಿನ್ನರ್ ಆಗಿ ಸ್ಥಾನ ಪಡೆದಿದ್ದರು. ಇದಾಗ್ಯೂ ಅವರಿಗೆ ಒಂದೇ ಒಂದು ಪಂದ್ಯದಲ್ಲಿ ಕಣಕ್ಕಿಳಿಯಲು ಅವಕಾಶ ಸಿಕ್ಕಿರಲಿಲ್ಲ. ಅಲ್ಲದೆ 2023ರ ಬಳಿಕ ಚಹಲ್ ಭಾರತದ ಪರ ಯಾವುದೇ ಟಿ20 ಪಂದ್ಯವಾಡಿಲ್ಲ. ಇದೀಗ ಏಷ್ಯಾಕಪ್ ತಂಡದಲ್ಲೂ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ರಿಷಭ್ ಪಂತ್: ಟಿ20 ವಿಶ್ವಕಪ್ 2024 ರಲ್ಲಿ ಟೀಮ್ ಇಂಡಿಯಾ ಪರ ವಿಕೆಟ್ ಕೀಪರ್ ಆಗಿ ರಿಷಭ್ ಪಂತ್ ಕಣಕ್ಕಿಳಿದಿದ್ದರು. ಅಲ್ಲದೆ ಈ ಬಾರಿ ಏಷ್ಯಾಕಪ್ನಲ್ಲೂ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ವೇಳೆ ಗಾಯಗೊಂಡಿರುವ ಕಾರಣ ಅವರನ್ನು ಏಷ್ಯಾಕಪ್ ತಂಡದಿಂದ ಹೊರಗಿಡಲಾಗಿದೆ.

ಮೊಹಮ್ಮದ್ ಸಿರಾಜ್: 2024ರ ಟಿ20 ವಿಶ್ವಕಪ್ ಚಾಂಪಿಯನ್ ತಂಡದ ಭಾಗವಾಗಿದ್ದ ಮೊಹಮ್ಮದ್ ಸಿರಾಜ್ ಅವರನ್ನು ಮುಂಬರುವ ಏಷ್ಯಾಕಪ್ಗೆ ಆಯ್ಕೆ ಮಾಡಲಾಗಿಲ್ಲ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಸಿರಾಜ್ಗೆ ವಿಶ್ರಾಂತಿ ನೀಡುವ ಸಲುವಾಗಿ ಟಿ20 ತಂಡದಿಂದ ಕೈ ಬಿಡಲಾಗಿದೆ.

ಟಿ20 ವಿಶ್ವಕಪ್ 2024 ಭಾರತ ತಂಡ : ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್ ) , ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್ ) , ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.

ಏಷ್ಯಾ ಕಪ್ಗೆ ಭಾರತ ತಂಡ: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ರಿಂಕು ಸಿಂಗ್.




