Updated on: Feb 21, 2023 | 10:30 PM
ಬರೋಬ್ಬರಿ 17 ಸಿಕ್ಸ್ ಹಾಗೂ 9 ಫೋರ್ಗಳು...ಇದು ಡಿವೈ ಪಾಟೀಲ್ ಕಪ್ನಲ್ಲಿ ಆಟಗಾರರೊಬ್ಬರ ಬ್ಯಾಟ್ನಿಂದ ಮೂಡಿಬಂದ ಬೌಂಡರಿಗಳು. ಅಷ್ಟೇ ಅಲ್ಲದೆ ಈ ಬೌಂಡರಿಗಳ ನೆರವಿನಿಂದ ಭರ್ಜರಿ ಶತಕವನ್ನೂ ಕೂಡ ಸಿಡಿಸಿ ಅಬ್ಬರಿಸಿದರು.
ಹೌದು, ದೇಶೀಯ ಅಂಗಳದಲ್ಲಿ ಇಂತಹದೊಂದು ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಆಟಗಾರನ ಹೆಸರು ಪ್ರಭ್ಸಿಮ್ರಾನ್ ಸಿಂಗ್. ಡಿವೈ ಪಾಟೀಲ್ ಕಪ್ನ ಗ್ರೂಪ್ ಸಿ ಪಂದ್ಯದಲ್ಲಿ ಸಿಎಜಿ ಹಾಗೂ ಇನ್ಕಮ್ ಟ್ಯಾಕ್ಸ್ ತಂಡಗಳು ಮುಖಾಮುಖಿಯಾಗಿತ್ತು.
ಈ ಪಂದ್ಯದಲ್ಲಿ ಸಿಎಜಿ ಪರ ಆರಂಭಿಕನಾಗಿ ಆಡಿದ ಪ್ರಭ್ಸಿಮ್ರಾನ್ ಸಿಂಗ್ ಅಕ್ಷರಶಃ ಅಬ್ಬರಿಸಿದರು. ಐಟಿ ತಂಡ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ಸಿಮ್ರಾನ್ ಸಿಕ್ಸ್ಗಳ ಸುರಿಮಳೆಗೈದರು. ಪರಿಣಾಮ ಯುವ ದಾಂಡಿಗನ ಬ್ಯಾಟ್ನಿಂದ ಸ್ಪೋಟಕ ಶತಕ ಮೂಡಿಬಂತು.
ಭರ್ಜರಿ ಸೆಂಚುರಿ ಬಳಿಕ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಪ್ರಭ್ಸಿಮ್ರಾನ್ 17 ಸಿಡಿಲಬ್ಬರದ ಸಿಕ್ಸ್ ಹಾಗೂ 9 ಫೋರ್ಗಳನ್ನು ಬಾರಿಸಿದರು. ಈ ಮೂಲಕ ಕೇವಲ 55 ಎಸೆತಗಳಲ್ಲಿ 161 ರನ್ ಚಚ್ಚಿದರು. ಪರಿಣಾಮ ಸಿಎಜಿ ತಂಡವು ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 267 ರನ್ ಕಲೆಹಾಕಿತು.
268 ರನ್ಗಳ ಬೃಹತ್ ಟಾರ್ಗೆಟ್ ಅನ್ನು ಬೆನ್ನತ್ತಿದ ಐಟಿ ತಂಡವು 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 152 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಸಿಎಜಿ ತಂಡವು 115 ರನ್ಗಳ ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ 161 ರನ್ ಬಾರಿಸಿ ಮಿಂಚಿದ್ದ ಪ್ರಭ್ಸಿಮ್ರಾನ್ ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿರುವ ಪ್ರಭ್ಸಿಮ್ರಾನ್ ಸಿಂಗ್ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದಾರೆ. ಇದೀಗ ಐಪಿಎಲ್ ಆರಂಭಕ್ಕೂ ಮುನ್ನ ಅಬ್ಬರಿಸುವ ಮೂಲಕ ಈ ಬಾರಿ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಪಡೆಯುವ ವಿಶ್ವಾಸದಲ್ಲಿದ್ದಾರೆ.