
ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬೆನ್ನಲ್ಲೇ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ (PSL 2025) ಭಾಗವಹಿಸಿರುವ ವಿದೇಶಿ ಆಟಗಾರರಿಗೆ ಆತಂಕ ಶುರುವಾಗಿದೆ. ಅದರಲ್ಲೂ ಪಾಕ್ ಮೇಲೆ ಭಾರತ ಯುದ್ಧ ಘೋಷಿಸಲಿದೆಯಾ ಎಂಬ ಟೆನ್ಶನ್ನಲ್ಲಿದ್ದಾರೆ ಪಿಎಸ್ಎಲ್ನ ಫಾರಿನ್ ಪ್ಲೇಯರ್ಸ್.

ಇದರ ನಡುವೆ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿರುವ ಇಂಗ್ಲೆಂಡ್ನ ವಿಕೆಟ್ ಕೀಪರ್ ಬ್ಯಾಟರ್ ಸ್ಯಾಮ್ ಬಿಲ್ಲಿಂಗ್ಸ್, ಭಾರತ ಮತ್ತು ಪಾಕಿಸ್ತಾನ್ ನಡುವಣ ಪರಿಸ್ಥಿತಿ ಆದಷ್ಟು ಬೇಗ ಸುಧಾರಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

ಈ ಬಾರಿಯ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಸ್ಯಾಮ್ ಬಿಲ್ಲಿಂಗ್ ಲಾಹೋರ್ ಖಲಂದರ್ಸ್ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ. ಇದೀಗ ಬಿಲ್ಲಿಂಗ್ಸ್ ಸೇರಿದಂತೆ ಇಂಗ್ಲೆಂಡ್ನ ಹಲವು ಆಟಗಾರರು ಅರ್ಧದಲ್ಲೇ ಟೂರ್ನಿ ತೊರೆಯುವ ಬಗ್ಗೆ ಪಿಎಸ್ಎಲ್ ಆಯೋಜಕರೊಂದಿಗೆ ಚರ್ಚಿಸಿದ್ದಾರೆ ಎಂದು ವರದಿಯಾಗಿದೆ.

ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಇಂಗ್ಲೆಂಡ್ನ ಜೇಮ್ಸ್ ವಿನ್ಸ್, ಟಾಮ್ ಕರನ್, ಸ್ಯಾಮ್ ಬಿಲ್ಲಿಂಗ್ಸ್, ಕ್ರಿಸ್ ಜೋರ್ಡಾನ್, ಡೇವಿಡ್ ವಿಲ್ಲಿ, ಲ್ಯೂಕ್ ವುಡ್ ಮತ್ತು ಟಾಮ್ ಕೊಹ್ಲರ್-ಕ್ಯಾಡ್ಮೋರ್ ಕಾಣಿಸಿಕೊಂಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ್ ನಡುವಣ ಯುದ್ಧದ ಭೀತಿ ಹಿನ್ನಲೆ ಈ ಆಟಗಾರರು ತವರಿಗೆ ವಾಪಾಸಾಗುವ ಸಾಧ್ಯತೆ ಹೆಚ್ಚಿದೆ.

ಅಂದಹಾಗೆ ಸ್ಯಾಮ್ ಬಿಲ್ಲಿಂಗ್ ಈ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ 27 ಇನಿಂಗ್ಸ್ ಆಡಿದ್ದ ಬಿಲ್ಲಿಂಗ್ಸ್ 3 ಅರ್ಧಶತಕಗಳೊಂದಿಗೆ ಒಟ್ಟು 503 ರನ್ ಕಲೆಹಾಕಿದ್ದರು.

ಆದರೆ ಈ ಬಾರಿಯ ಐಪಿಎಲ್ನಲ್ಲಿ ಅವಕಾಶ ಸಿಗದಿರುವ ಕಾರಣ ಅವರು ಪಾಕಿಸ್ತಾನ್ ಸೂಪರ್ ಲೀಗ್ನತ್ತ ಮುಖ ಮಾಡಿದ್ದರು. ಇದೀಗ ಯುದ್ಧದ ಭೀತಿ ಹಿನ್ನಲೆಯಲ್ಲಿ ಉಭಯ ದೇಶಗಳ ಪರಿಸ್ಥಿತಿಯು ಆದಷ್ಟು ಬೇಗ ಸುಧಾರಿಸಲಿ ಎಂದು ಪ್ರಾರ್ಥಿಸುತ್ತಿರುವುದಾಗಿ ಸ್ಯಾಮ್ ಬಿಲ್ಲಿಂಗ್ಸ್ ತಿಳಿಸಿದ್ದಾರೆ.