
ಟಿ20 ಕ್ರಿಕೆಟ್ನಲ್ಲಿ ಪಂಜಾಜ್ ಕಿಂಗ್ಸ್ ತಂಡದ ಯುವ ದಾಂಡಿಗ ಪ್ರಿಯಾಂಶ್ (Priyansh Arya) ಆರ್ಯ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಅದು ಕೂಡ ಭರ್ಜರಿ ಶತಕ ಸಿಡಿಸುವ ಮೂಲಕ ಎಂಬುದು ವಿಶೇಷ. ಚಂಡೀಗಢ್ನ ಪಿಸಿಎ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ (PBKS) ಪರ ಪ್ರಿಯಾಂಶ್ ಆರ್ಯ ಇನಿಂಗ್ಸ್ ಆರಂಭಿಸಿದ್ದರು.

ಮೊದಲ ಎಸೆತದಲ್ಲೇ ಸಿಕ್ಸ್ ಸಿಡಿಸುವ ಮೂಲಕ ಶುಭಾರಂಭ ಮಾಡಿದ ಪ್ರಿಯಾಂಶ್ ಆರ್ಯ ಸ್ಪೋಟಕ ಇನಿಂಗ್ಸ್ ಆಡಿದರು. ಒಂದೆಡೆ ವಿಕೆಟ್ ಪತನಗೊಳುತ್ತಿದ್ದರೂ ಯುವ ದಾಂಡಿಗ ನಿರ್ಭೀತಿಯಿಂದಲೇ ಸಿಎಸ್ಕೆ ಬೌಲರ್ಗಳನ್ನು ಎದುರಿಸಿದರು. ಪರಿಣಾಮ ಪ್ರಿಯಾಂಶ್ ಆರ್ಯ ಬ್ಯಾಟ್ನಿಂದ 39 ಎಸೆತಗಳಲ್ಲಿ ಸೆಂಚುರಿ ಮೂಡಿಬಂತು.

ಈ ಸೆಂಚುರಿಯೊಂದಿಗೆ ಪ್ರಿಯಾಂಶ್ ಆರ್ಯ ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ಬರೆದರು. ಅಂದರೆ ತಂಡದ ಟಾಪ್-5 ಬ್ಯಾಟ್ಸ್ಮನ್ಗಳು ಒಂದಂಕಿ ಮೊತ್ತಕ್ಕೆ ಔಟಾದರೂ, ಶತಕ ಬಾರಿಸಿದ ಆರಂಭಿಕ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಪ್ರಿಯಾಂಶ್ ತಮ್ಮದಾಗಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ನ್ಯೂಝಿಲೆಂಡ್ನ ಕಾಲಿನ್ ಮನ್ರೊ 98 ರನ್ ಬಾರಿಸಿದ್ದು ಈವರೆಗೆ ಶ್ರೇಷ್ಠ ದಾಖಲೆಯಾಗಿತ್ತು. 2022 ರಲ್ಲಿ ಬಿಗ್ ಬ್ಯಾಷ್ ಲೀಗ್ನಲ್ಲಿ ಬ್ರಿಸ್ಬೇನ್ ಹೀಟ್ ತಂಡದ ಟಾಪ್-5 ಬ್ಯಾಟರ್ಗಳು ಒಂದಂಕಿ ಮೊತ್ತಕ್ಕೆ ಔಟಾದರೂ, ಕಾಲಿನ್ ಮನ್ರೊ 98 ರನ್ ಬಾರಿಸಿ ಅಬ್ಬರಿಸಿದ್ದರು. ಈ ಮೂಲಕ ಅಗ್ರ ಕ್ರಮಾಂಕದ ಬ್ಯಾಟರ್ಗಳ ವೈಫಲ್ಯದ ನಡುವೆ ಅತ್ಯಧಿಕ ರನ್ ಕಲೆಹಾಕಿದ ಆರಂಭಿಕ ಬ್ಯಾಟರ್ ಎನಿಸಿಕೊಂಡಿದ್ದರು.

ಇದೀಗ ಈ ದಾಖಲೆಯನ್ನು ಪ್ರಿಯಾಂಶ್ ಆರ್ಯ ಅಳಿಸಿ ಹಾಕಿದ್ದಾರೆ. ಅಲ್ಲದೆ ಟಾಪ್-5 ಬ್ಯಾಟರ್ಗಳು ಒಂದಂಕಿ ರನ್ಗಳೊಂದಿಗೆ ವಿಫಲರಾದರೂ, ಟಿ20 ಕ್ರಿಕೆಟ್ನಲ್ಲಿ ಶತಕ ಸಿಡಿಸಿದ ವಿಶ್ವದ ಮೊದಲ ಓಪನರ್ ಎಂಬ ವಿಶ್ವ ದಾಖಲೆಯನ್ನು ಪ್ರಿಯಾಂಶ್ ಆರ್ಯ ತಮ್ಮದಾಗಿಸಿಕೊಂಡಿದ್ದಾರೆ.

ಅಲ್ಲದೆ ಐಪಿಎಲ್ ಇತಿಹಾಸದಲ್ಲಿ 40 ಕ್ಕಿಂತ ಕಡಿಮೆ ಎಸೆತಗಳಲ್ಲಿ ಶತಕ ಸಿಡಿಸಿದ 5ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ 2010 ರಲ್ಲಿ 37 ಎಸೆತಗಳಲ್ಲಿ ಶತಕ ಸಿಡಿಸಿದ್ದ ಯೂಸುಫ್ ಪಠಾಣ್ ಬಳಿಕ ಈ ಸಾಧನೆ ಮಾಡಿದ 2ನೇ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಇದರ ಜೊತೆಗೆ ಐಪಿಎಲ್ ಇತಿಹಾಸದಲ್ಲಿ ಅತೀ ವೇಗದ ಶತಕ ಸಿಡಿಸಿದ ಅನ್ಕ್ಯಾಪ್ಡ್ ಆಟಗಾರ ಎಂಬ ದಾಖಲೆಯನ್ನು ಪ್ರಿಯಾಂಶ್ ಆರ್ಯ ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಚೊಚ್ಚಲ ಐಪಿಎಲ್ ಟೂರ್ನಿಯಲ್ಲೇ ಪಂಜಾಬ್ ಕಿಂಗ್ಸ್ ತಂಡದ ಯುವ ದಾಂಡಿಗ ಭರ್ಜರಿ ಸೆಂಚುರಿ ಸಿಡಿಸಿ ಹಲವು ದಾಖಲೆಯನ್ನು ನಿರ್ಮಿಸಿರುವುದು ವಿಶೇಷ.
Published On - 10:32 am, Wed, 9 April 25