IPL 2025 vs PSL 2025: ಐಪಿಎಲ್ vs ಪಿಎಸ್ಎಲ್ ಮುಖಾಮುಖಿ
IPL 2025 vs PSL 2025: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಒಟ್ಟು 10 ತಂಡಗಳು ಕಣಕ್ಕಿಳಿದರೆ, ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ 6 ತಂಡಗಳು ಆಡುತ್ತವೆ. ಇದಾಗ್ಯೂ ಉಭಯ ಲೀಗ್ಗಳ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಇಲ್ಲಿ ಐಪಿಎಲ್ ವಿಶ್ವದ ಶ್ರೀಮಂತ ಲೀಗ್ ಆಗಿ ಗುರುತಿಸಿಕೊಂಡರೆ, ಅತ್ತ ಪಿಎಸ್ಎಲ್ ಇನ್ನೂ ಸಹ ವಿಶ್ವದ ಪ್ರಮುಖ ಲೀಗ್ ಎಂಬ ಸ್ಥಾನಮಾನ ಪಡೆದಿಲ್ಲ. ಇದೀಗ ಈ ಎರಡು ಲೀಗ್ಗಳು ಒಂದೇ ಸಮಯದಲ್ಲಿ ಆಯೋಜನೆಗೊಳ್ಳುವ ಸಾಧ್ಯತೆಯಿದೆ.
Updated on: Aug 14, 2024 | 10:08 AM

ಭಾರತೀಯ ಕ್ರಿಕೆಟ್ ಮಂಡಳಿ ಆಯೋಜಿಸುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಹಾಗೂ ಪಾಕ್ ಕ್ರಿಕೆಟ್ ಬೋರ್ಡ್ ನಡೆಸುವ ಪಾಕಿಸ್ತಾನ್ ಸೂಪರ್ ಲೀಗ್ (PSL) ಟೂರ್ನಿಗಳು ಮುಖಾಮುಖಿಯಾಗಲಿದೆ. ಅದು ಸಹ ಒಂದೇ ಸಮಯದಲ್ಲಿ ಆಯೋಜನೆಗೊಳ್ಳುವ ಮೂಲಕ ಎಂಬುದು ವಿಶೇಷ.

ಅಂದರೆ ಮುಂಬರುವ ಐಪಿಎಲ್ ಹಾಗೂ ಪಿಎಸ್ಎಲ್ ಟೂರ್ನಿಗಳು ಒಂದೇ ಸಮಯದಲ್ಲಿ ನಡೆಯಲಿದೆ. ಈ ಹಿಂದೆ ಪಾಕಿಸ್ತಾನ್ ಸೂಪರ್ ಲೀಗ್ ಅನ್ನು ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಆಯೋಜಿಸಲಾಗುತ್ತಿತ್ತು. ಇತ್ತ ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ ತಿಂಗಳಲ್ಲಿ ಶುರುವಾದರೆ ಮೇ ತಿಂಗಳಲ್ಲಿ ಕೊನೆಗೊಳ್ಳುತ್ತಿತ್ತು. ಆದರೆ ಈ ಬಾರಿ ಪಿಎಸ್ಎಲ್ ಟೂರ್ನಿಯು ಮಾರ್ಚ್ನಲ್ಲೇ ಆರಂಭವಾಗಲಿದೆ ಎಂದು ವರದಿಯಾಗಿದೆ.

ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಫೆಬ್ರವರಿ ಮತ್ತು ಮಾರ್ಚ್ ನಡುವೆ ಚಾಂಪಿಯನ್ಸ್ ಟ್ರೋಫಿ ಆಯೋಜಿಸಬೇಕಿದೆ. ಪ್ರಸ್ತುತ ಮಾಹಿತಿ ಪ್ರಕಾರ, ಫೆಬ್ರವರಿ 9 ರಿಂದ ಚಾಂಪಿಯನ್ಸ್ ಟ್ರೋಫಿ ಶುರುವಾಗಲಿದ್ದು, ಮಾರ್ಚ್ 9 ಕ್ಕೆ ಮುಗಿಯಲಿದೆ. ಇದಾದ ಬಳಿಕವಷ್ಟೇ ಪಿಎಸ್ಎಲ್ ಆಯೋಜಿಸಲು ಅವಕಾಶ ಇರಲಿದೆ. ಅಂದರೆ ಮಾರ್ಚ್ ತಿಂಗಳ ಮೂರನೇ ವಾರದಿಂದ ಪಾಕಿಸ್ತಾನ್ ಸೂಪರ್ ಲೀಗ್ ಶುರುವಾಗಬಹುದು.

ಇತ್ತ ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ ಅಂತ್ಯದಲ್ಲಿ ಆರಂಭವಾಗುವುದು ಬಹುತೇಕ ಖಚಿತ. ಅದರಂತೆ ಮಾರ್ಚ್ ತಿಂಗಳಲ್ಲೇ ಪಿಎಸ್ಎಲ್ ಹಾಗೂ ಐಪಿಎಲ್ ಶುರುವಾಗುವ ಸಾಧ್ಯತೆ ಹೆಚ್ಚಿದೆ. ಇದುವೇ ಈಗ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ನ ಚಿಂತೆ ಹೆಚ್ಚಿಸಿದೆ.

ಏಕೆಂದರೆ ವಿಶ್ವದ ಬಹುತೇಕ ಸ್ಟಾರ್ ಆಟಗಾರರು ಐಪಿಎಲ್ನಲ್ಲಿ ಕಣಕ್ಕಿಳಿಯಲು ಬಯಸುತ್ತಾರೆ. ಒಂದು ವೇಳೆ ಐಪಿಎಲ್ ವೇಳೆಯೇ ಪಿಎಸ್ಎಲ್ ನಡೆದರೆ ಅನೇಕ ವಿದೇಶಿ ಆಟಗಾರರು ಪಾಕಿಸ್ತಾನ್ ಸೂಪರ್ ಲೀಗ್ನಿಂದ ಹೊರಗುಳಿಯುವುದು ಖಚಿತ. ಅಲ್ಲದೆ ಐಪಿಎಲ್ನಲ್ಲಿ ಅವಕಾಶ ಸಿಗದ ಆಟಗಾರರು ಮಾತ್ರ ಪಿಎಸ್ಎಲ್ನತ್ತ ಮುಖ ಮಾಡಲಿದ್ದಾರೆ.

ಇದುವೇ ಈಗ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ನ ಚಿಂತೆಗೆ ಕಾರಣವಾಗಿದೆ. ಏಕೆಂದರೆ ಐಪಿಎಲ್ ನಡುವಣ ಕ್ಲ್ಯಾಶ್ ತಪ್ಪಿಸಬೇಕಿದ್ದರೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಜೂನ್ ತಿಂಗಳವರೆಗೆ ಕಾಯಲೇಬೇಕು. ಅಂದರೆ ಐಪಿಎಲ್ ಸಂಪೂರ್ಣ ಮುಗಿದ ಬಳಿಕವಷ್ಟೇ ಪಾಕಿಸ್ತಾನ್ ಸೂಪರ್ ಲೀಗ್ ಆಯೋಜಿಸಬೇಕಾಗುತ್ತದೆ. ಹೀಗಾಗಿಯೇ ಇದೀಗ ಪಿಎಸ್ಎಲ್ ಆಯೋಜನೆಗೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಬದಲಿ ವಿಂಡೋ ಬಗ್ಗೆ ಯೋಚಿಸುತ್ತಿದ್ದು, ಇದು ಅಸಾಧ್ಯವಾದರೆ IPL vs PSL ಮುಖಾಮುಖಿಯಾಗುವುದು ಖಚಿತ ಎನ್ನಬಹುದು.




