- Kannada News Photo gallery Cricket photos Ranji Trophy: Sarfaraz’s younger brother in Mumbai team Kannada News zp
Ranji Trophy: ಮುಂಬೈ ತಂಡದಲ್ಲಿ ಸಹೋದರರ ಸವಾಲ್..!
Sarfaraz Khan And Musheer Khan: ಮುಂಬೈ ರಣಜಿ ತಂಡದ ಸ್ಟಾರ್ ಬ್ಯಾಟ್ಸ್ಮನ್ ಆಗಿ ಗುರುತಿಸಿಕೊಂಡಿರುವ ಸರ್ಫರಾಜ್ ಅವರ ಸಹೋದರ ಮುಶೀರ್ ಖಾನ್ ಯುವ ಆಲ್ರೌಂಡರ್.
Updated on: Dec 28, 2022 | 4:09 PM

ಟೀಮ್ ಇಂಡಿಯಾದಲ್ಲಿ ಸಹೋದರರು ಜೊತೆಯಾಗಿ ಕಾಣಿಸಿಕೊಂಡಿದ್ದು ತುಂಬಾ ವಿರಳ. ಈ ಹಿಂದೆ ಮೊಹಿಂದರ್ ಅಮರನಾಥ್-ಸುರಿಂದರ್ ಅಮರನಾಥ್, ಇರ್ಫಾನ್ ಪಠಾಣ್-ಯೂಸುಫ್ ಪಠಾಣ್ ಜೊತೆಯಾಗಿ ಆಡಿದ್ದರೆ, ಆ ಬಳಿಕ ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ಕಾಣಿಸಿಕೊಂಡಿದ್ದರು. ಇದಾಗ್ಯೂ ಇತ್ತೀಚಿನ ದಿನಗಳಲ್ಲಿ ಭಾರತದ ಪರ ಅಣ್ಣ-ತಮ್ಮ ಜೊತೆಯಾಗಿ ಆಡಿದ ನಿದರ್ಶನವಿಲ್ಲ. ಆದರೆ ಇದೀಗ ದೇಶೀಯ ಅಂಗಳದಲ್ಲಿ ಸಹೋದರರು ಜೊತೆಯಾಗಿ ಕಣಕ್ಕಿಳಿದಿದ್ದಾರೆ. ಅದು ಕೂಡ ಬಲಿಷ್ಠ ಮುಂಬೈ ತಂಡದಲ್ಲಿ ಎಂಬುದು ವಿಶೇಷ.

ಹೌದು, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಮುಶೀರ್ ಖಾನ್ ಪದಾರ್ಪಣೆ ಮಾಡಿದ್ದಾರೆ. ತಮ್ಮ ಚೊಚ್ಚಲ ಪಂದ್ಯಕ್ಕಾಗಿ ಅಣ್ಣ ಸರ್ಫರಾಜ್ ಖಾನ್ ಅವರಿಂದಲೇ ಕ್ಯಾಪ್ ಪಡೆದಿದ್ದು ವಿಶೇಷ.

ಮುಂಬೈ ರಣಜಿ ತಂಡದ ಸ್ಟಾರ್ ಬ್ಯಾಟ್ಸ್ಮನ್ ಆಗಿ ಗುರುತಿಸಿಕೊಂಡಿರುವ ಸರ್ಫರಾಜ್ ಅವರ ಸಹೋದರ ಮುಶೀರ್ ಖಾನ್ ಯುವ ಆಲ್ರೌಂಡರ್. ಇದಾಗ್ಯೂ ಮೊದಲ ಇನಿಂಗ್ಸ್ನಲ್ಲಿ 17 ವರ್ಷದ ಯುವ ಆಲ್ರೌಂಡರ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ.

ತಮ್ಮ ಮೊದಲ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿರುವ ಮುಶೀರ್ ಖಾನ್ ಕಲೆಹಾಕಿದ್ದು ಕೇವಲ 12 ರನ್ ಮಾತ್ರ. ಇನ್ನು ಬೌಲಿಂಗ್ನಲ್ಲಿ 5 ಓವರ್ ಮಾಡಿದ್ದರೂ ಯಾವುದೇ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿಲ್ಲ. ಇದಾಗ್ಯೂ ಯುವ ಆಟಗಾರನಿಂದ 2ನೇ ಇನಿಂಗ್ಸ್ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನಿರೀಕ್ಷಿಸಲಾಗಿದೆ.

2021-22ರ ರಣಜಿ ಟೂರ್ನಿಯ 9 ಇನಿಂಗ್ಸ್ಗಳಲ್ಲಿ 4 ಶತಕ ಹಾಗೂ 2 ಅರ್ಧಶತಕದೊಂದಿಗೆ 982 ರನ್ ಬಾರಿಸಿರುವ ಸರ್ಫರಾಜ್ ಖಾನ್ ಸದ್ಯ ಭಾರತ ಟೆಸ್ಟ್ ತಂಡದಲ್ಲಿ ಅವಕಾಶವನ್ನು ಎದುರು ನೋಡುತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ 17 ವರ್ಷದ ತಮ್ಮ ಮುಶೀರ್ ಖಾನ್ ಕೂಡ ಆಲ್ರೌಂಡರ್ ಆಗಿ ಮುಂಬೈ ಪ್ಲೇಯಿಂಗ್ 11 ನಲ್ಲಿ ಅವಕಾಶ ಪಡೆದಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಈ ಸಹೋದರರು ಟೀಮ್ ಇಂಡಿಯಾದಲ್ಲಿ ಜೊತೆಯಾಗಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.
