
2026 ರ ಐಪಿಎಲ್ ಮಾರ್ಚ್ ತಿಂಗಳ ಕೊನೆಯ ವಾರದಿಂದ ಆರಂಭವಾಗುವ ಸಾಧ್ಯತೆಗಳಿವೆ. ಈ ಲೀಗ್ಗಾಗಿ ಎಲ್ಲಾ ಸಿದ್ಧತೆಗಳು ಕೂಡ ಅಂತಿಮಗೊಂಡಿದೆ. ಎಲ್ಲಾ 10 ಫ್ರಾಂಚೈಸಿಗಳು ಕೂಡ ಈಗಾಗಲೇ ತಯಾರಿಯಲ್ಲಿ ತೊಡಗಿವೆ. ಆದಾಗ್ಯೂ ಹಾಲಿ ಚಾಂಪಿಯನ್ ಆರ್‌ಸಿಬಿ ಮಾತ್ರ ಯಾವ ಕ್ರೀಡಾಂಗಣದಲ್ಲಿ ತನ್ನ ತವರು ಪಂದ್ಯಗಳನ್ನು ಆಡಲಿದೆ ಎಂಬುದು ಇನ್ನು ಖಚಿತವಾಗಿಲ್ಲ.

ವಾಸ್ತವವಾಗಿ ಕಳೆದ ವರ್ಷ ಅಂದರೆ 2025 ರಲ್ಲಿ ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ ಉಂಟಾದ ಕಾಲ್ತುಳಿತದಿಂದ 11 ಅಮಾಯಕರು ಪ್ರಾಣಬಿಟ್ಟಿದ್ದರು. ಆ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದುವರೆಗೆ ಯಾವುದೇ ಪಂದ್ಯಗಳು ನಡೆದಿಲ್ಲ. ಇದೀಗ ಮುಂಬರುವ ಐಪಿಎಲ್ ಪಂದ್ಯಗಳು ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುವುದು ಅನುಮಾನ ಎನ್ನಲಾಗುತ್ತಿದೆ.

ಇದೆಲ್ಲದರ ನಡುವೆ ಆರ್‌ಸಿಬಿ ಫ್ರಾಂಚೈಸಿ ತನ್ನ ತವರು ಮೈದಾನಗಳನ್ನು ನಡೆಸಲು ಎರಡು ಮೈದಾನಗಳನ್ನು ಆಯ್ಕೆ ಮಾಡಿದೆ ಎಂತಲೂ ವರದಿಯಾಗಿತ್ತು. ಇದೀಗ ಇದೆಲ್ಲದರ ನಡುವೆ ಆರ್‌ಸಿಬಿ ಫ್ರಾಂಚೈಸಿ ಚಿನ್ನಸ್ವಾಮಿ ಮೈದಾನದಲ್ಲಿ ತವರು ಪಂದ್ಯಗಳನ್ನು ನಡೆಸಲು ಉತ್ಸುಕತೆ ತೋರಿದೆ. ಆದರೆ ಪಂದ್ಯಗಳು ನಡೆಯಬೇಕೆಂದರೆ ಕೆಲವು ಷರತ್ತುಗಳನ್ನು ಪೂರ್ಣಗೊಳಿಸುವಂತೆ ಕೆಎಸ್‌ಸಿಎ ಬಳಿ ಕೇಳಿದೆ.

ಜನವರಿ 16 ರಂದು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಆರ್‌ಸಿಬಿ ಅದರಲ್ಲಿ, ‘ಕ್ರೀಡಾಂಗಣದಲ್ಲಿ 300 ರಿಂದ 350 ಎಐ ಕ್ಯಾಮೆರಾಗಳನ್ನು ಅಳವಡಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದ ಬಳಿ ಔಪಚಾರಿಕವಾಗಿ ಪ್ರಸ್ತಾಪಿಸಲಾಗಿದೆ. ಈ ಕ್ಯಾಮೆರಾಗಳು ಕ್ರೀಡಾಂಗಣ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಮೇಲ್ವಿಚಾರಣೆ ಮಾಡುತ್ತವೆ ಮತ್ತು ಜನಸಂದಣಿಯ ನಿರ್ವಹಣೆಗೆ ಸಹಾಯ ಮಾಡುತ್ತವೆ.

ಫ್ರಾಂಚೈಸಿಯ ಪ್ರಕಾರ, ಈ ಕ್ಯಾಮೆರಾಗಳು ಕೆಎಸ್‌ಸಿಎ ಮತ್ತು ಭದ್ರತಾ ಸಂಸ್ಥೆಗಳು ಜನಸಂದಣಿಯನ್ನು ಮೇಲ್ವಿಚಾರಣೆ ಮಾಡಲು, ಕ್ರೀಡಾಂಗಣದ ಹೊರಗೆ ಸರತಿ ಸಾಲುಗಳನ್ನು ನಿರ್ವಹಿಸಲು ಮತ್ತು ಅಕ್ರಮವಾಗಿ ಕ್ರೀಡಾಂಗಣಕ್ಕೆ ಪ್ರವೇಶಿಸಲು ಪ್ರಯತ್ನಿಸುವವರನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ.

ಆರ್‌ಸಿಬಿ ಫ್ರಾಂಚೈಸಿ ಈ ಪ್ರಸ್ತಾವನೆಯನ್ನು ಕೆಎಸ್‌ಸಿಎ ಮುಂದಿಟ್ಟಿರುವುದು ಮಾತ್ರವಲ್ಲದೆ, ಎಐ ಕ್ಯಾಮೆರಾಗಳನ್ನು ಅಳವಡಿಸಲು ತಗಲುವ ವೆಚ್ಚವನ್ನು ತಾನೇ ಬರಿಸುವುದಾಗಿ ತಿಳಿಸಿದೆ. ಕ್ಯಾಮೆರಾಗಳನ್ನು ಅಳವಡಿಸಲು ಬೇಕಾಗುವ ಸರಿಸುಮಾರು 4.5 ಕೋಟಿ ವೆಚ್ಚವನ್ನು ಸಂಪೂರ್ಣವಾಗಿ ಭರಿಸುವುದಾಗಿ ಆರ್‌ಸಿಬಿ ತಿಳಿಸಿದೆ.

ಇದೆಲ್ಲದರ ನಡುವೆ ಮುಂಬರುವ ಐಪಿಎಲ್ನಲ್ಲಿ ತನ್ನ ತವರು ಪಂದ್ಯಗಳನ್ನು ಆರ್‌ಸಿಬಿ ಎರಡು ವಿಭಿನ್ನ ಕ್ರೀಡಾಂಗಣಗಳಲ್ಲಿ ಆಡಲಿದೆ ಎಂದು ವರದಿಯಾಗಿದೆ. ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ಆರ್ಸಿಬಿಯ ಎರಡು ಪಂದ್ಯಗಳನ್ನು ನಡೆಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಅವರೇ ಸ್ವತಃ ಘೋಷಿಸಿದ್ದಾರೆ.

ಹಾಗೆಯೇ ಉಳಿದ ಪಂದ್ಯಗಳನ್ನು ಮಹಾರಾಷ್ಟ್ರದ ಪುಣೆಯಲ್ಲಿ ನಡೆಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಫ್ರಾಂಚೈಸಿ ಈಗಾಗಲೇ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್‌ನೊಂದಿಗೆ ಈ ಬಗ್ಗೆ ಚರ್ಚಿಸಿದ್ದು, ಪುಣೆ ಕ್ರೀಡಾಂಗಣವನ್ನು ಸಹ ಪರಿಶೀಲಿಸಿದೆ. ಆದಾಗ್ಯೂ, ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.