- Kannada News Photo gallery Cricket photos RCB Owners Looking To Sell Franchise, Claimed by Lalit Modi
IPL 2026: RCB ತಂಡ ಮಾರಾಟ..?
RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಡಿಯಾಜಿಯೋ ಕಂಪೆನಿಯ ಒಡೆತನದಲ್ಲಿದೆ. ಬ್ರಿಟನ್ ಮೂಲದ ಡಿಯಾಜಿಯೋ ತನ್ನ ಭಾರತೀಯ ಘಟಕವಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಎಂಬ ಆಲ್ಕೋಹಾಲ್ ಕಂಪನಿಯ ಮೂಲಕ ಆರ್ಸಿಬಿ ಫ್ರಾಂಚೈಸಿಯನ್ನು ಹೊಂದಿದೆ. ಇದೀಗ ಡಿಯಾಜಿಯೋ ಕಂಪೆನಿಯು ಆರ್ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ಐಪಿಎಲ್ನ ಮಾಜಿ ಅಧ್ಯಕ್ಷರು ಹೇಳಿದ್ದಾರೆ.
Updated on: Sep 30, 2025 | 12:54 PM

ಇಂಡಿಯನ್ ಪ್ರೀಮಿಯರ್ ಲೀಗ್ನ (IPL) ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಬದಲಾಗಲಿದೆಯಾ? ಇಂತಹದೊಂದು ಪ್ರಶ್ನೆ ಹುಟ್ಟಿಕೊಳ್ಳಲು ಮುಖ್ಯ ಕಾರಣ, ಐಪಿಎಲ್ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ಮುಂದಿಟ್ಟಿರುವ ಹೊಸ ಸುದ್ದಿ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನು ಮಾರಾಟ ಮಾಡಲು ಡಿಯಾಜಿಯೋ ಕಂಪೆನಿ ಮುಂದಾಗಿದೆ ಎಂದು ಲಲಿತ್ ಮೋದಿ ಹೇಳಿದ್ದಾರೆ. ಈ ಹಿಂದೆ ಆರ್ಸಿಬಿ ಇಂತಹ ಸುದ್ದಿಯನ್ನು ನಿರಾಕರಿಸಿತ್ತು. ಆದರೆ ಇದೀಗ ಆರ್ಸಿಬಿ ಮಾಲೀಕರು ತಮ್ಮ ಬ್ಯಾಲೆನ್ಸ್ ಶೀಟ್‌ನಿಂದ ತೆಗೆದು ಮಾರಾಟ ಮಾಡಲು ನಿರ್ಧರಿಸಿದ್ದಾರೆಂದು ತೋರುತ್ತಿದೆ.

ಆರ್ಸಿಬಿ ತಂಡಕ್ಕೆ ಅಪಾರ ಅಭಿಮಾನಿಗಳಿದ್ದಾರೆ. ಇದೀಗ ತಂಡ ಚಾಂಪಿಯನ್ ಪಟ್ಟವನ್ನು ಸಹ ಅಲಂಕರಿಸಿದೆ. ಹೀಗಾಗಿ ಉತ್ತಮ ನಿರ್ವಹಣಾ ತಂಡವನ್ನು ಫ್ರಾಂಚೈಸಿ ಹೊಂದಿದೆ. ಇದೇ ಕಾರಣದಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಸಂಪೂರ್ಣ ಶೇರು ಮಾರಾಟ ಮಾಡಲು ಡಿಯಾಜಿಯೋ ಕಂಪೆನಿ ಆಸಕ್ತಿ ತೋರಿದೆ.

ಅಲ್ಲದೆ ಐಪಿಎಲ್ 2026 ಕ್ಕೂ ಮುನ್ನ ಒಟ್ಟಾರೆಯಾಗಿ ಲಭ್ಯವಿರುವ ಏಕೈಕ ತಂಡವಾಗಿ ಆರ್ಸಿಬಿ ಮಾರಾಟವಾಗಬಹುದು. ಬಿಗ್ ಗ್ಲೋಬಲ್ ಫಂಡ್‌ಗಳಲ್ಲಿ ಒಂದು ಅಥವಾ ಬೃಹತ್ ಹೂಡಿಕೆದಾರರು ಆರ್ಸಿಬಿ ತಂಡವನ್ನು ಖರೀದಿಸುವ ಸಾಧ್ಯತೆಯಿದೆ. ಏಕೆಂದರೆ ಭಾರತದಲ್ಲಿ ಹೂಡಿಕೆ ಮಾಡಲು ಇದಕ್ಕಿಂತ ಉತ್ತಮ ಅವಕಾಶ ಇನ್ನೊಂದಿಲ್ಲ. ಅದನ್ನು ಬಳಸಿಕೊಳ್ಳುವ ಯಾರಿಗಾದರೂ ಶುಭವಾಗಲಿ ಎಂದು ಲಲಿತ್ ಮೋದಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇದಕ್ಕೂ ಮುನ್ನ ಜುಲೈ ತಿಂಗಳಲ್ಲಿ ಆರ್ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲಾಗುತ್ತದೆ ಎಂದು ವರದಿಯಾಗಿತ್ತು. ಅದು ಕೂಡ ಸುಮಾರು 2 ಬಿಲಿಯನ್ ಡಾಲರ್ಗೆ. ಅಂದರೆ ಭಾರತೀಯ ರೂಪಾಯಿ ಮೌಲ್ಯ ಬರೋಬ್ಬರಿ 17 ಸಾವಿರ ಕೋಟಿ ರೂ.ಗೆ ಆರ್ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲು ಡಿಯಾಜಿಯೋ ಕಂಪೆನಿ ಮುಂದಾಗಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಆ ಬಳಿಕ ಈ ಸುದ್ದಿಯನ್ನು ಆರ್ಸಿಬಿ ನಿರಾಕರಿಸಿತ್ತು.

ಇದೀಗ ಲಲಿತ್ ಮೋದಿ ಪ್ರಕಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನು ಮಾರಾಟ ಮಾಡಲು ತೆರೆ ಮರೆಯ ಸಿದ್ಧತೆಗಳು ಶುರುವಾಗಿದೆ. ಈ ಮಾರಾಟಕ್ಕಾಗಿ ಸಿಟಿ ಬ್ಯಾಂಕ್ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸಲಿದೆ ಎಂಬುದನ್ನು ಸಹ ಖಚಿತಪಡಿಸಿದ್ದಾರೆ. ಹೀಗಾಗಿ ಐಪಿಎಲ್ ಸೀಸನ್-19 ಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮಾರಾಟವಾದರೂ ಅಚ್ಚರಿಪಡಬೇಕಿಲ್ಲ.




