- Kannada News Photo gallery Cricket photos RCB's Rajat Patidar Shines in Syed Mushtaq Ali Trophy Ahead of IPL 2025
SMAT 2024: ಆರ್ಸಿಬಿಗೆ ಗುಡ್ನ್ಯೂಸ್; ಹ್ಯಾಟ್ರಿಕ್ ಅರ್ಧಶತಕ ಚಚ್ಚಿದ ರಜತ್ ಪಾಟಿದರ್
Rajat Patidar: ರಜತ್ ಪಾಟಿದಾರ್ ಅವರು ಸೈಯದ್ ಮುಷ್ಟಾಕ್ ಅಲಿ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಮಧ್ಯಪ್ರದೇಶ ತಂಡದ ನಾಯಕನಾಗಿ, ಅವರು ಗೆಲುವಿನ ಹಾದಿಯಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಬಂಗಾಳ ವಿರುದ್ಧದ ಪಂದ್ಯದಲ್ಲಿ 68 ರನ್ ಗಳಿಸಿದ ಪಾಟಿದರ್ ಈ ಟೂರ್ನಿಯಲ್ಲಿ ಇದುವರೆಗೆ ಸತತ ಮೂರು ಅರ್ಧಶತಕ ಸಿಡಿಸಿದ್ದಾರೆ.
Updated on: Nov 29, 2024 | 8:54 PM

2025 ರ ಐಪಿಎಲ್ ಆರಂಭವಾಗುವುದಕ್ಕೂ ಮುನ್ನವೇ ಆರ್ಸಿಬಿಗೆ ಸಿಹಿ ಸುದ್ದಿಗಳು ಸಿಗುತ್ತಿವೆ. ತಂಡಕ್ಕೆ ಹೊಸದಾಗಿ ಸೇರಿಕೊಂಡಿರುವ ಆಟಗಾರರು ವಿಶ್ವದ ಇತರೆ ಲೀಗ್ಗಳಲ್ಲಿ ರನ್ ಮಳೆ ಹರಿಸುತ್ತಿದ್ದಾರೆ. ಇದರ ಜೊತೆಗೆ ತಂಡದಲ್ಲಿರುವ ಹಳೆಯ ಆಟಗಾರರು ಕೂಡ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.

ಐಪಿಎಲ್ ಮೆಗಾ ಹರಾಜಿಗೂ ಮುನ್ನ ಆರ್ಸಿಬಿ ಉಳಿಸಿಕೊಂಡಿದ್ದ ಆಟಗಾರರ ಪೈಕಿ ರಜತ್ ಪಾಟಿದರ್ ಕೂಡ ಒಬ್ಬರು. ರಜತ್ಗೆ ಬರೋಬ್ಬರಿ 11 ಕೋಟಿ ರೂ. ನೀಡಿ ಉಳಿಸಿಕೊಳ್ಳಲಾಗಿದೆ. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ರಜತ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದು ಖಚಿತವಾಗಿದೆ.

ಆದರೆ ಅದಕ್ಕೂ ಮುನ್ನ ರಜತ್, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಧ್ಯಪ್ರದೇಶ ತಂಡದ ನಾಯಕತ್ವಹಿಸಿಕೊಂಡಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ತಂಡವನ್ನು ಒಂದರ ನಂತರ ಒಂದರಂತೆ ಗೆಲುವಿನತ್ತ ಮುನ್ನಡೆಸುತ್ತಿದ್ದಾರೆ. ಇದರ ಹೊರತಾಗಿ ಅವರು ಬ್ಯಾಟ್ಸ್‌ಮನ್ ಆಗಿಯೂ ಯಶಸ್ವಿಯಾಗುತ್ತಿದ್ದಾರೆ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2024 ರಲ್ಲಿ ಮಧ್ಯಪ್ರದೇಶ ತಂಡ ಇದುವರೆಗೆ 4 ಪಂದ್ಯಗಳನ್ನು ಆಡಿದೆ. ಈ ಎಲ್ಲ ಪಂದ್ಯಗಳಲ್ಲಿ ಮಧ್ಯಪ್ರದೇಶ ಗೆದ್ದಿದೆ. ಬಂಗಾಳ ವಿರುದ್ಧ ನಡೆದ ಪಂದ್ಯದಲ್ಲಿಯೂ ಮಧ್ಯಪ್ರದೇಶ ಏಕಪಕ್ಷೀಯವಾಗಿ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಾಲ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು.

ಇದಕ್ಕೆ ಉತ್ತರವಾಗಿ ಮಧ್ಯಪ್ರದೇಶ 19.4 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಈ ವೇಳೆ ನಾಯಕ ರಜತ್ ಪಾಟಿದಾರ್ ಕೇವಲ 40 ಎಸೆತಗಳನ್ನು ಎದುರಿಸಿ ಗರಿಷ್ಠ 68 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್‌ಗಳು ಸೇರಿದ್ದವು.

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಇದುವರೆಗೆ ರಜತ್ ಪಾಟಿದಾರ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು ಆಡಿರುವ 4 ಪಂದ್ಯಗಳಲ್ಲಿ 3 ಅರ್ಧಶತಕಗಳನ್ನು ಬಾರಿಸಿದ್ದಾರೆ. ಟೂರ್ನಿಯ ಆರಂಭಿಕ ಪಂದ್ಯದಲ್ಲಿ 7 ಎಸೆತಗಳಲ್ಲಿ 5 ರನ್ ಗಳಿಸಿ ಔಟಾಗಿದ್ದ ರಜತ್ ಇದರ ನಂತರ ಸತತ ಮೂರು ಪಂದ್ಯಗಳಲ್ಲಿ 50+ ರನ್ ಗಳಿಸಿದ್ದಾರೆ.

ಬಂಗಾಳ ವಿರುದ್ಧದ ಪಂದ್ಯಕ್ಕೂ ಮೊದಲು, ಅವರು ಪಂಜಾಬ್ ವಿರುದ್ಧ 37 ಎಸೆತಗಳಲ್ಲಿ 62 ರನ್, ಮೇಘಾಲಯ ವಿರುದ್ಧ ಕೇವಲ 36 ಎಸೆತಗಳಲ್ಲಿ 78 ರನ್ ಬಾರಿಸಿದ್ದರು. ಇದೀಗ ಬಂಗಾಳದ ವಿರುದ್ಧವೂ ರಜತ್ 68 ರನ್ಗಳ ಗೆಲುವಿನ ಇನ್ನಿಂಗ್ಸ್ ಆಡಿದ್ದಾರೆ.



















