
ಎದುರಾಳಿ ಬೌಲರ್ ಯಾರೇ ಇರಲಿ, ಪಿಚ್ ಹೇಗೇ ವರ್ತಿಸಲಿ, ರಿಷಭ್ ಪಂತ್ ಬ್ಯಾಟ್ ಬೀಸಲು ನಿಂತರೆ ಚೆಂಡು ಬೌಂಡರಿ ಗೆರೆ ದಾಟಿ ಪ್ರೇಕ್ಷಕರ ಗ್ಯಾಲರಿ ಸೇರುವುದು ಗ್ಯಾರಂಟಿ. ನ್ಯೂಝಿಲೆಂಡ್ನ ವೆಲ್ಲಿಂಗ್ಟನ್ ಮೈದಾನದಲ್ಲಿಯೂ ಇಂದು ಅಕ್ಷರಶಃ ಸಿಕ್ಸರ್ಗಳ ಸುನಾಮಿಯೇ ಎದ್ದಿತ್ತು. ಕಿವೀಸ್ ನೆಲದಲ್ಲಿ ನಿಂತು, ಅವರದೇ ದೇಶದ ದಿಗ್ಗಜ ಬ್ರೆಂಡನ್ ಮೆಕಲಂ ಅವರ ಹೆಸರಿನಲ್ಲಿದ್ದ ಐತಿಹಾಸಿಕ ದಾಖಲೆಯನ್ನು ರಿಷಭ್ ಪಂತ್ ಉಡಾಯಿಸಿದ್ದಾರೆ. (PC: gettyimages)
ವೆಲ್ಲಿಂಗ್ಟನ್ನ ಬೇಸಿನ್ ರಿಸರ್ವ್ ಮೈದಾನದಲ್ಲಿ ಕಿವೀಸ್ ಬೌಲರ್ಗಳ ಬೆವರಿಳಿಸಿದ ಪಂತ್, ಕೇವಲ 153 ಎಸೆತಗಳಲ್ಲಿ 128 ರನ್ಗಳ ಭರ್ಜರಿ ಶತಕ ಸಿಡಿಸಿದರು. ಈ ಇನ್ನಿಂಗ್ಸ್ನಲ್ಲಿ ಬಾರಿಸಿದ 6 ಆಕಾಶದೆತ್ತರದ ಸಿಕ್ಸರ್ಗಳೊಂದಿಗೆ, ಟೆಸ್ಟ್ ಇತಿಹಾಸದಲ್ಲೇ ಅತ್ಯಧಿಕ ಸಿಕ್ಸರ್ ಸಿಡಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. (PC: gettyimages)
ಇದಕ್ಕೂ ಮುನ್ನ ಈ ದಾಖಲೆ ನ್ಯೂಝಿಲೆಂಡ್ ತಂಡದ ಮಾಜಿ ನಾಯಕ ಬ್ರೆಂಡನ್ ಮೆಕಲಂ ಹೆಸರಿನಲ್ಲಿತ್ತು. ಮೆಕಲಂ ತಮ್ಮ ವೃತ್ತಿಜೀವನದ 176 ಇನ್ನಿಂಗ್ಸ್ಗಳಲ್ಲಿ 107 ಸಿಕ್ಸರ್ಗಳನ್ನು ಬಾರಿಸಿದ್ದರು. ಈ ಮೂಲಕ ಟೆಸ್ಟ್ನಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿದ ವಿಶ್ವದ 2ನೇ ಬ್ಯಾಟರ್ ಎನಿಸಿಕೊಂಡಿದ್ದರು. (PC: gettyimages)
ಇದೀಗ ಈ ದಾಖಲೆಯನ್ನು ಇದೀಗ ರಿಷಭ್ ಪಂತ್ ಅಳಿಸಿ ಹಾಕಿದ್ದಾರೆ. ಟೀಮ್ ಇಂಡಿಯಾ ಪರ ಈವರೆಗೆ 91 ಇನಿಂಗ್ಸ್ ಆಡಿರುವ ರಿಷಭ್ ಪಂತ್ ಬರೋಬ್ಬರಿ 108 ಸಿಕ್ಸರ್ ಸಿಡಿಸಿದ್ದಾರೆ. ಈ ಮೂಲಕ ಟೆಸ್ಟ್ ಇತಿಹಾಸದಲ್ಲೇ ಅತೀ ಹೆಚ್ಚು ಸಿಕ್ಸ್ ಬಾರಿಸಿದ ವಿಶ್ವದ 2ನೇ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. (PC: gettyimages)
ಇನ್ನು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಬೆನ್ ಸ್ಟೋಕ್ಸ್. ಟೆಸ್ಟ್ನಲ್ಲಿ 220 ಇನ್ನಿಂಗ್ಸ್ಗಳನ್ನಾಡಿರುವ ಸ್ಟೋಕ್ಸ್ ಒಟ್ಟು 138 ಸಿಕ್ಸರ್ ಬಾರಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ದಾಖಲೆಯನ್ನು ಮುರಿಯಲು ರಿಷಭ್ ಪಂತ್ಗೆ ಬೇಕಿರುವುದು ಕೇವಲ 31 ಸಿಕ್ಸರ್ಗಳು ಮಾತ್ರ. ಹೀಗಾಗಿ ಮುಂಬರುವ ದಿನಗಳಲ್ಲಿ ಪಂತ್ ಕಡೆಯಿಂದ ಭರ್ಜರಿ ದಾಖಲೆಯನ್ನು ನಿರೀಕ್ಷಿಸಬಹುದು. (PC: gettyimages)