6 ದಿನಗಳಲ್ಲಿ ರೋಹಿತ್ ಶರ್ಮಾ ಭವಿಷ್ಯ ನಿರ್ಧಾರ
Rohit Sharma: ಟೆಸ್ಟ್ ಹಾಗೂ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ರೋಹಿತ್ ಶರ್ಮಾ ಈ ವರ್ಷ ಆಡಲಿರುವುದು ಕೇವಲ 6 ಏಕದಿನ ಪಂದ್ಯಗಳನ್ನು ಮಾತ್ರ. ಅಂದರೆ ಅಭಿಮಾನಿಗಳ ಮುಂದೆ ಹಿಟ್ಮ್ಯಾನ್ ಕೇವಲ 6 ದಿನಗಳು ಮಾತ್ರ ಬ್ಯಾಟ್ ಬೀಸಲಿದ್ದಾರೆ. ಈ ಆರು ಪಂದ್ಯಗಳು ರೋಹಿತ್ ಶರ್ಮಾ ಪಾಲಿಗೆ ನಿರ್ಣಾಯಕ.
Updated on: Oct 06, 2025 | 9:54 AM

ಭಾರತ ಏಕದಿನ ತಂಡದ ನಾಯಕ ಬದಲಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಮುನ್ನ ರೋಹಿತ್ ಶರ್ಮಾ (Rohit Sharma) ಸ್ಥಾನಕ್ಕೆ ಶುಭ್ಮನ್ ಗಿಲ್ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಭಾರತೀಯ ಕ್ರಿಕೆಟ್ನಲ್ಲಿ ಹಿಟ್ಮ್ಯಾನ್ ಯುಗಾಂತ್ಯದ ಮುನ್ಸೂಚನೆ ಸಿಕ್ಕಿದೆ.

ಇದಾಗ್ಯೂ ರೋಹಿತ್ ಶರ್ಮಾ 2027ರ ಏಕದಿನ ವಿಶ್ವಕಪ್ ಆಡುವ ಇರಾದೆಯಲ್ಲಿದ್ದಾರೆ. ಈ ವಿಶ್ವಕಪ್ಗೂ ಮುನ್ನ ಹಿಟ್ಮ್ಯಾನ್ ಭರ್ಜರಿ ಪ್ರದರ್ಶನ ನೀಡಬೇಕಾದ ಅನಿವಾರ್ಯತೆ ಇದೆ. ಅದರಲ್ಲೂ ಈ ವರ್ಷ ನಡೆಯಲಿರುವ 6 ಏಕದಿನ ಪಂದ್ಯಗಳು ರೋಹಿತ್ ಶರ್ಮಾ ಪಾಲಿಗೆ ನಿರ್ಣಾಯಕ.

ಅಕ್ಟೋಬರ್ 19 ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿ ಶುರುವಾಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ 3 ಪಂದ್ಯಗಳನ್ನಾಡಲಿದೆ. ಇದಾದ ಬಳಿಕ ಭಾರತ ತಂಡವು ಸೌತ್ ಆಫ್ರಿಕಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಆಡಲಿದೆ.

ಈ ಆರು ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಿದರೆ ಮಾತ್ರ ರೋಹಿತ್ ಶರ್ಮಾ ಅವರನ್ನು ಏಕದಿನ ತಂಡದಲ್ಲಿ ಉಳಿಸಲಾಗುತ್ತದೆ. ಒಂದು ವೇಳೆ ಈ ವರ್ಷ ನಡೆಯಲಿರುವ 6 ಏಕದಿನ ಪಂದ್ಯಗಳಲ್ಲಿ ಹಿಟ್ಮ್ಯಾನ್ ವಿಫಲರಾದರೆ ಟೀಮ್ ಇಂಡಿಯಾದಿಂದ ಗೇಟ್ ಪಾಸ್ ಖಚಿತ.

ಏಕೆಂದರೆ 2027ರ ಏಕದಿನ ವಿಶ್ವಕಪ್ ಅನ್ನು ಮುಂದಿಟ್ಟುಕೊಂಡು ಭಾರತ ತಂಡವನ್ನು ರೂಪಿಸಬೇಕಿದೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಸ್ಪಷ್ಟಪಡಿಸಿದ್ದಾರೆ. ಇದೇ ಕಾರಣದಿಂದಾಗಿ ಏಕದಿನ ತಂಡದ ನಾಯಕತ್ವದಿಂದ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಲಾಗಿದೆ.

ಒಂದು ವೇಳೆ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ವಿಫಲರಾದರೆ, ನವೆಂಬರ್-ಡಿಸೆಂಬರ್ನಲ್ಲಿ ನಡೆಯಲಿರುವ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಮತ್ತೊಂದು ಚಾನ್ಸ್ ನೀಡಲಾಗುತ್ತದೆ. ಈ ಸರಣಿಯಲ್ಲೂ ನಿರೀಕ್ಷಿತ ಪ್ರದರ್ಶನ ನೀಡದಿದ್ದರೆ 2026ರ ಸರಣಿಗಳಿಗೆ ಅವರನ್ನು ಆಯ್ಕೆ ಮಾಡುವುದು ಡೌಟ್. ಹೀಗಾಗಿಯೇ ಈ ವರ್ಷ ನಡೆಯಲಿರುವ 6 ಏಕದಿನ ಪಂದ್ಯಗಳು ರೋಹಿತ್ ಶರ್ಮಾ ಅವರ ಭವಿಷ್ಯ ನಿರ್ಧರಿಸಲಿದೆ ಎನ್ನಬಹುದು.




