- Kannada News Photo gallery Cricket photos Rohit Sharma needs 14 more sixes to become the leading six hitter for India in Test
Rohit Sharma: 5 ಮ್ಯಾಚ್ 15 ಸಿಕ್ಸ್: ಸೆಹ್ವಾಗ್ ದಾಖಲೆ ಮೇಲೆ ಕಣ್ಣಿಟ್ಟ ರೋಹಿತ್ ಶರ್ಮಾ
India vs England: ಭಾರತ ಮತ್ತು ಇಂಗ್ಲೆಂಡ್ ನಡುವಣ ಸರಣಿಯು ಇದೇ ತಿಂಗಳ 25 ರಿಂದ ಶುರುವಾಗಲಿದೆ. 5 ಪಂದ್ಯಗಳ ಈ ಸರಣಿಯ ಮೂಲಕ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ನಲ್ಲಿ ಸಿಕ್ಸರ್ ಕಿಂಗ್ ಎನಿಸಿಕೊಳ್ಳಬಹುದು. ಅದು ಕೂಡ ವೀರೇಂದ್ರ ಸೆಹ್ವಾಗ್ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.
Updated on:Jan 21, 2024 | 11:34 AM

ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಗೆ ವೇದಿಕೆ ಸಿದ್ಧವಾಗಿದೆ. ಜನವರಿ 25 ರಿಂದ ಶುರುವಾಗಲಿರುವ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್ಗೆ ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂ ಆತಿಥ್ಯವಹಿಸಲಿದೆ. ಈ ಪಂದ್ಯಗಳ ಮೂಲಕ ವಿಶೇಷ ದಾಖಲೆ ಬರೆಯುವ ಹೊಸ್ತಿಲಲ್ಲಿದ್ದಾರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ.

ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳಲ್ಲಿ ಒಟ್ಟು 15 ಸಿಕ್ಸ್ಗಳನ್ನು ಬಾರಿಸಿದರೆ ಹೊಸ ದಾಖಲೆಯೊಂದು ರೋಹಿತ್ ಶರ್ಮಾ ಪಾಲಾಗಲಿದೆ. ಅದು ಕೂಡ ಸಿಡಿಲಬ್ಬರದ ಸಿಡಿಲಮರಿ ವೀರೇಂದ್ರ ಸೆಹ್ವಾಗ್ ಅವರ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಟೀಮ್ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಸಿಕ್ಸ್ಗಳನ್ನು ಬಾರಿಸಿದ ದಾಖಲೆ ವೀರೇಂದ್ರ ಸೆಹ್ವಾಗ್ ಹೆಸರಿನಲ್ಲಿದೆ. ಭಾರತದ ಪರ ಒಟ್ಟು 180 ಟೆಸ್ಟ್ ಇನಿಂಗ್ಸ್ ಆಡಿರುವ ಸೆಹ್ವಾಗ್ 91 ಸಿಕ್ಸ್ಗಳನ್ನು ಬಾರಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಭಾರತೀಯ ಎನಿಸಿಕೊಂಡಿದ್ದಾರೆ.

ಸೆಹ್ವಾಗ್ ಹೆಸರಿನಲ್ಲಿರುವ ಈ ದಾಖಲೆಯನ್ನು ಮುರಿಯಲು ರೋಹಿತ್ ಶರ್ಮಾಗೆ ಕೇವಲ 15 ಸಿಕ್ಸರ್ಗಳ ಅವಶ್ಯಕತೆಯಿದೆ. ಅಂದರೆ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಹಿಟ್ಮ್ಯಾನ್ 15 ಸಿಕ್ಸ್ ಸಿಡಿಸಿದರೆ ಟೆಸ್ಟ್ ಕ್ರಿಕೆಟ್ನಲ್ಲಿ ಅವರ ಒಟ್ಟು ಸಿಕ್ಸರ್ಗಳ 92 ಕ್ಕೇರಲಿದೆ.

ಸದ್ಯ 92 ಟೆಸ್ಟ್ ಇನಿಂಗ್ಸ್ ಆಡಿರುವ ರೋಹಿತ್ ಶರ್ಮಾ ಒಟ್ಟು 77 ಸಿಕ್ಸ್ಗಳನ್ನು ಬಾರಿಸಿದ್ದಾರೆ. ಇದೀಗ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಹಿಟ್ಮ್ಯಾನ್ ಮುಂದೆ 10 ಇನಿಂಗ್ಸ್ಗಳಿವೆ. ಈ ಇನಿಂಗ್ಸ್ಗಳ ಮೂಲಕ 15 ಸಿಕ್ಸ್ಗಳನ್ನು ಬಾರಿಸಿದರೆ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿದ ಭಾರತೀಯ ಎಂಬ ದಾಖಲೆ ರೋಹಿತ್ ಶರ್ಮಾ ಪಾಲಾಗಲಿದೆ.

ಇನ್ನು ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ವಿಶ್ವ ದಾಖಲೆ ಇರುವುದು ಇಂಗ್ಲೆಂಡ್ನ ಬೆನ್ ಸ್ಟೋಕ್ಸ್ ಹೆಸರಿನಲ್ಲಿ. ಒಟ್ಟು 175 ಇನಿಂಗ್ಸ್ ಆಡಿರುವ ಸ್ಟೋಕ್ಸ್ 124 ಸಿಕ್ಸ್ಗಳನ್ನು ಬಾರಿಸಿ ಟೆಸ್ಟ್ ಕ್ರಿಕೆಟ್ನ ಸಿಕ್ಸರ್ ಕಿಂಗ್ ಎನಿಸಿಕೊಂಡಿದ್ದಾರೆ.
Published On - 10:58 am, Sun, 21 January 24




