
ಇಂಗ್ಲೆಂಡ್ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೊಸ ದಾಖಲೆ ಬರೆದಿದ್ದಾರೆ. ಅದು ಕೂಡ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದ್ದ ಸಿಕ್ಸರ್ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಅಂದರೆ ಭಾರತದ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ದಾಖಲೆ ಪಟ್ಟಿಯಲ್ಲಿ ಮಹೇಂದ್ರ ಸಿಂಗ್ ಧೋನಿ ದ್ವಿತೀಯ ಸ್ಥಾನದಲ್ಲಿದ್ದರು. 144 ಟೆಸ್ಟ್ ಇನಿಂಗ್ಸ್ ಆಡಿರುವ ಧೋನಿ ಒಟ್ಟು 78 ಸಿಕ್ಸ್ಗಳನ್ನು ಬಾರಿಸಿ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯನ್ನು ಹಿಟ್ಮ್ಯಾನ್ ಮುರಿದಿದ್ದಾರೆ.

ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ 2 ಭರ್ಜರಿ ಸಿಕ್ಸರ್ ಸಿಡಿಸುವುದರೊಂದಿಗೆ ಟೀಮ್ ಇಂಡಿಯಾ ಪರ ಟೆಸ್ಟ್ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಭಾರತದ ಪರ 97 ಇನಿಂಗ್ಸ್ ಆಡಿರುವ ರೋಹಿತ್ ಶರ್ಮಾ ಇದುವರೆಗೆ 79 ಸಿಕ್ಸರ್ಗಳನ್ನು ಬಾರಿಸಿದ್ದಾರೆ.

ಇನ್ನು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಟೀಮ್ ಇಂಡಿಯಾದ ಮಾಜಿ ಡ್ಯಾಶಿಂಗ್ ಓಪನರ್ ವಿರೇಂದ್ರ ಸೆಹ್ವಾಗ್. ಸಿಡಿಲಬ್ಬರದ ಸಿಡಿಲಮರಿ ಖ್ಯಾತಿಯ ಸೆಹ್ವಾಗ್ 180 ಟೆಸ್ಟ್ ಇನಿಂಗ್ಸ್ಗಳಿಂದ ಒಟ್ಟು 91 ಸಿಕ್ಸ್ಗಳನ್ನು ಬಾರಿಸಿ ಈ ದಾಖಲೆ ನಿರ್ಮಿಸಿದ್ದಾರೆ.

ಹಾಗೆಯೇ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ವಿಶ್ವ ದಾಖಲೆ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಹೆಸರಿನಲ್ಲಿದೆ. ಒಟ್ಟು 177 ಟೆಸ್ಟ್ ಇನಿಂಗ್ಸ್ ಆಡಿರುವ ಸ್ಟೋಕ್ಸ್ ಇದುವರೆಗೆ 127 ಸಿಕ್ಸ್ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿಟ್ಟಿದ್ದಾರೆ.

ಭಾರತ-ಇಂಗ್ಲೆಂಡ್ 3ನೇ ಟೆಸ್ಟ್: ಈ ಪಂದ್ಯದಲ್ಲಿ ಆರಂಭಿಕ ಆಘಾತದ ಹೊರತಾಗಿಯೂ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ಉತ್ತಮ ಜೊತೆಯಾಟ ಪ್ರದರ್ಶಿಸಿದ್ದಾರೆ. 4ನೇ ವಿಕೆಟ್ಗೆ 150* ರನ್ಗಳನ್ನು ಪೇರಿಸಿರುವ ಈ ಜೋಡಿ ಭೋಜನ ವಿರಾಮದ ವೇಳೆಗೆ ತಂಡದ ಮೊತ್ತವನ್ನು 3 ವಿಕೆಟ್ ನಷ್ಟಕ್ಕೆ 185 ಕ್ಕೆ ತಂದು ನಿಲ್ಲಿಸಿದ್ದಾರೆ. ಸದ್ಯ ರೋಹಿತ್ ಶರ್ಮಾ (97) ಹಾಗೂ ರವೀಂದ್ರ ಜಡೇಜಾ (68) ಕ್ರೀಸ್ನಲ್ಲಿದ್ದು, ಭಾರತ ತಂಡ ಬೃಹತ್ ಮೊತ್ತ ಪೇರಿಸುವ ನಿರೀಕ್ಷೆಯಿದೆ.