Updated on: Jun 13, 2023 | 8:30 PM
ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಸತತ ಎರಡನೇ ಬಾರಿ ಐಸಿಸಿ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲು ವಿಫಲವಾಗಿದೆ. ಪ್ರಬಲ ನಾಯಕತ್ವ ಮತ್ತು ಪಂದ್ಯಾವಳಿಗಳನ್ನು ಗೆಲ್ಲುವ ಸಾಮರ್ಥ್ಯದೊಂದಿಗೆ, ರೋಹಿತ್ ಅವರನ್ನು ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತ ತಂಡದ ನಾಯಕನನ್ನಾಗಿ ಮಾಡಲಾಗಿತ್ತು.
ಆದರೆ ಅವರ ನಾಯಕತ್ವದಲ್ಲಿ ಇದುವರೆಗೆ ನಿರೀಕ್ಷಿತ ಮೂಡಿಬಂದಿಲ್ಲ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತ ಸೋತ ನಂತರ, ತಂಡದಲ್ಲಿ ಬದಲಾವಣೆಯ ಕೂಗುಗಳು ಕೇಳಿ ಬರುತ್ತಿದೆ. ಇದರಲ್ಲಿ ರೋಹಿತ್ ಶರ್ಮಾ ಅವರ ನಾಯಕತ್ವ ಕೂಡ ಸೇರಿಕೊಂಡಿದೆ.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ಟೆಸ್ಟ್ ಸರಣಿಯಲ್ಲಿ ಸೋತ ನಂತರ ವಿರಾಟ್ ಕೊಹ್ಲಿ ತಮ್ಮ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ ನಾಯಕನ ಜವಾಬ್ದಾರಿ ರೋಹಿತ್ ಶರ್ಮಾಗೆ ವಹಿಸಲಾಗಿತ್ತು. ಆದರೆ ಹಿಟ್ಮ್ಯಾನ್ ನಾಯಕತ್ವದಲ್ಲೂ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಸೋತಿದೆ.
ಇದರ ಬೆನ್ನಲ್ಲೇ ನಾಯಕತ್ವದ ಬದಲಾವಣೆಯ ಕೂಗುಗಳು ಜೋರಾಗಿವೆ. ಆದರೆ ಸದ್ಯದ ಮಟ್ಟಿಗೆ ರೋಹಿತ್ ಶರ್ಮಾ ಸೇಫ್. ಅದು ಎರಡು ಪಂದ್ಯಗಳಿಗೆ ಮಾತ್ರ ಎಂಬುದು ಇಲ್ಲಿ ಉಲ್ಲೇಖಾರ್ಹ. ಅಂದರೆ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಈ ಸರಣಿಯಲ್ಲಿ ಭಾರತ 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಆದರೆ ಈ ಎರಡೂ ಪಂದ್ಯಗಳಲ್ಲೂ ರೋಹಿತ್ ಶರ್ಮಾ ಬ್ಯಾಟಿಂಗ್ನಲ್ಲಿ ವಿಫಲರಾದರೆ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿಸುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಏಕೆಂದರೆ ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಂದ್ಯಗಳನ್ನು ಗಮನದಲ್ಲಿರಿಸಿ ಈಗಲೇ ನೂತನ ನಾಯಕನನ್ನು ಆಯ್ಕೆ ಮಾಡಬೇಕು. ಇತ್ತ 35 ವರ್ಷದ ರೋಹಿತ್ ಶರ್ಮಾ ಮುಂದಿನ ವರ್ಷ ಟೀಮ್ ಇಂಡಿಯಾದಲ್ಲಿರುವುದು ಅನುಮಾನ. ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿನ ರೋಹಿತ್ ಶರ್ಮಾ ಅವರ ಪ್ರದರ್ಶನದ ಮೇಲೆ ಅವರ ಟೆಸ್ಟ್ ನಾಯಕತ್ವ ಉಳಿಯಲಿದೆ.
ಹಾಗೆಯೇ ಏಕದಿನ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಆಗದಿದ್ದರೆ ಅವರನ್ನು ಎಲ್ಲಾ ಮಾದರಿಯ ನಾಯಕತ್ವದಿಂದಲೂ ಕೆಳಗಿಳಿಸಲಾಗುತ್ತದೆ ಎಂಬ ಸುದ್ದಿಗಳು ಕೂಡ ಹರಿದಾಡುತ್ತಿದೆ. ಹೀಗಾಗಿಯೇ ಮುಂಬರುವ ಟೆಸ್ಟ್ ಸರಣಿಗಳು ರೋಹಿತ್ ಶರ್ಮಾ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯಗಳಾಗಿ ಮಾರ್ಪಟ್ಟಿದೆ.