IPL 2023: ಐಪಿಎಲ್‌ನಲ್ಲಿ ಹೊಸ ತಂಡದ ಖರೀದಿಗೆ ನಟ ರಾಮ್ ಚರಣ್ ಪ್ಲ್ಯಾನ್..?
IPL 2023 Kannada: ಈಗಾಗಲೇ ನೇಮ್-ಫೇಮ್ ಹೊಂದಿರುವ ರಾಮ್ ಚರಣ್ ಐಪಿಎಲ್ ತಂಡದ ಮಾಲೀಕರಾದರೆ, ಪ್ರಾಯೋಜಕತ್ವಗಳು ಮತ್ತು ಇತರ ಆದಾಯದ ಸ್ಟ್ರೀಮ್‌ಗಳಿಂದ ಗಣನೀಯ ಲಾಭವನ್ನು ಗಳಿಸುವುದು ಖಚಿತ.
Updated on: May 12, 2023 | 8:30 PM

ಸೌತ್ ಸಿನಿರಂಗದ ಸೂಪರ್ ಸ್ಟಾರ್ ರಾಮ್ ಚರಣ್ ತೇಜ ಐಪಿಎಲ್ ತಂಡವನ್ನು ಖರೀದಿಸಲಿದ್ದಾರಾ? ಟಾಲಿವುಡ್ ಅಂಗಳದಲ್ಲಿ ಇಂತಹದೊಂದು ಟಾಕು ಶುರುವಾಗಿದೆ. ಇದನ್ನು ಪುಷ್ಠೀಕರಿಸುವಂತೆ ಕೆಲ ಮಾಧ್ಯಮಗಳು ಕೂಡ ಯಂಗ್ ಮೆಗಾಸ್ಟಾರ್ ಐಪಿಎಲ್ನತ್ತ ಮುಖ ಮಾಡಲಿದ್ದಾರೆ ಎಂದು ವರದಿ ಮಾಡಿದೆ.

ಈ ವರದಿಗಳ ಪ್ರಕಾರ, ರಾಮ್ ಚರಣ್ ಆಂಧ್ರ ಪ್ರದೇಶವನ್ನು ಕೇಂದ್ರೀಕರಿಸಿ ಐಪಿಎಲ್ ತಂಡವನ್ನು ಖರೀದಿಸಲು ಆಸಕ್ತಿ ಹೊಂದಿದ್ದಾರೆ. ಪ್ರಸ್ತುತ ಇರುವ ಸನ್ರೈಸರ್ಸ್ ಹೈದರಾಬಾದ್ ತಂಡವು ತೆಲಂಗಾಣ ರಾಜ್ಯವನ್ನು ಪ್ರತಿನಿಧಿಸುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಮತ್ತೊಂದು ತಂಡವನ್ನು ಪರಿಚಯಿಸಲು ರಾಮ್ ಚರಣ್ ಬಯಸಿದ್ದಾರೆ ಎಂದು ವರದಿಯಾಗಿದೆ.

ಇದಕ್ಕಾಗಿ ಆಂಧ್ರಪ್ರದೇಶವನ್ನು ಪ್ರತಿನಿಧಿಸುವ ವೈಝಾಗ್ ವಾರಿಯರ್ಸ್ ಹೆಸರಿನ ಹೊಸ ತಂಡವನ್ನು ಐಪಿಎಲ್‌ನಲ್ಲಿ ಪರಿಚಯಿಸಲು ರಾಮ್ ಚರಣ್ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ಐಪಿಎಲ್ಗೆ ಲಗ್ಗೆಯಿಡಲು ಮೆಗಾ ಸ್ಟಾರ್ ಕುಡಿ ಬಯಸಿದ್ದಾರಂತೆ.

ಇತ್ತ ಈಗಾಗಲೇ ನೇಮ್-ಫೇಮ್ ಹೊಂದಿರುವ ರಾಮ್ ಚರಣ್ ಐಪಿಎಲ್ ತಂಡದ ಮಾಲೀಕರಾದರೆ, ಪ್ರಾಯೋಜಕತ್ವಗಳು ಮತ್ತು ಇತರ ಆದಾಯದ ಸ್ಟ್ರೀಮ್‌ಗಳಿಂದ ಗಣನೀಯ ಲಾಭವನ್ನು ಗಳಿಸುವುದು ಖಚಿತ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ.

ಆದರೆ ಈಗಾಗಲೇ 10 ತಂಡಗಳನ್ನು ಹೊಂದಿರುವ ಐಪಿಎಲ್‌ನಲ್ಲಿ ಮತ್ತೊಂದು ಫ್ರಾಂಚೈಸಿಗೆ ಅವಕಾಶ ನೀಡುವ ಸಾಧ್ಯತೆ ತುಂಬಾ ಕಡಿಮೆ. ಒಂದು ವೇಳೆ ನೀಡಿದ್ರು 2 ತಂಡಗಳನ್ನು ಪರಿಚಯಿಸಬಹುದು. ಆದರೆ ಕಳೆದ ಸೀಸನ್ನಲ್ಲಿ 2 ತಂಡಗಳನ್ನು ಅವಕಾಶ ನೀಡಿದ್ದ ಬಿಸಿಸಿಐ ಇದೀಗ ಮತ್ತೆರಡು ಹೊಸ ತಂಡಗಳನ್ನು ಕಣಕ್ಕಿಳಿಸುವುದು ಕೂಡ ಅನುಮಾನ.

ಇದಾಗ್ಯೂ ಐಪಿಎಲ್‌ನಲ್ಲಿ ರಾಮ್ ಚರಣ್ ಅವರ ಮಾಲೀಕತ್ವದಲ್ಲಿ ತಂಡವೊಂದು ಸೇರ್ಪಡೆಯಾಗಲಿದೆ ಎಂಬ ಸುದ್ದಿಯಂತು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದಹಾಗೆ ರಾಮ್ ಚರಣ್ ತೇಜ ಈಗಾಗಲೇ ಪೋಲೋ ಕ್ಲಬ್ ತಂಡವನ್ನು ಹೊಂದಿದ್ದಾರೆ. ಇತ್ತ ಕ್ರೀಡೆಯ ಬಗ್ಗೆ ಅಪಾರ ಒಲವು ಹೊಂದಿರುವ ಕಾರಣ ಮುಂದೊಂದು ಐಪಿಎಲ್‌ನಲ್ಲಿ ಫ್ರಾಂಚೈಸಿ ಖರೀದಿಸಿದರೂ ಅಚ್ಚರಿಪಡಬೇಕಿಲ್ಲ.




