
ಪಾಕಿಸ್ತಾನ್ ತಂಡದ ಆರಂಭಿಕ ದಾಂಡಿಗ ಸಾಹಿಬ್ಝಾದ ಫರ್ಹಾನ್ (Sahibzada Farhan) ಟಿ20 ವಿಶ್ವಕಪ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಸಿಕ್ಸರ್ಗಳ ಸುರಿಮಳೆಗೈಯ್ಯುವ ಮೂಲಕ. ಈ ಸಿಕ್ಸರ್ಗಳೊಂದಿಗೆ ಟಿ20 ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಕ್ಯಾಂಡಿಯ ಪಲ್ಲೆಕೆಲೆ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಸಾಹಿಬ್ಝಾದ ಫರ್ಹಾನ್ 60 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 100 ರನ್ ಚಚ್ಚಿದ್ದರು. ಈ ವೇಳೆ ಸಿಡಿಸಿದ 5 ಸಿಕ್ಸರ್ಗಳೊಂದಿಗೆ ಟಿ20 ವಿಶ್ವಕಪ್ನ ಆವೃತ್ತಿಯೊಂದರಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ವೆಸ್ಟ್ ಇಂಡೀಸ್ನ ನಿಕೋಲಸ್ ಪೂರನ್ ಹೆಸರಿನಲ್ಲಿತ್ತು. 2024ರ ಟಿ20 ವಿಶ್ವಕಪ್ನಲ್ಲಿ ವಿಂಡೀಸ್ ಪರ ಆರ್ಭಟಿಸಿದ್ದ ಪೂರನ್ ಒಟ್ಟು 17 ಸಿಕ್ಸ್ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಸಾಹಿಬ್ಝಾದ ಫರ್ಹಾನ್ ಅಳಿಸಿ ಹಾಕಿದ್ದಾರೆ.

ಈ ಬಾರಿಯ ಟಿ20 ವಿಶ್ವಕಪ್ನಲ್ಲಿ 6 ಇನಿಂಗ್ಸ್ ಆಡಿರುವ ಸಾಹಿಬ್ಝಾದ ಫರ್ಹಾನ್ ಒಟ್ಟು 18 ಸಿಕ್ಸ್ ಸಿಡಿಸಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಬಾರಿಸಿದ 100 ರನ್ಗಳೊಂದಿಗೆ ಟಿ20 ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ವಿರಾಟ್ ಕೊಹ್ಲಿ (319) ಹೆಸರಿನಲ್ಲಿತ್ತು. ಆದರೆ ಈ ಬಾರಿ 383 ರನ್ ಕಲೆಹಾಕುವ ಮೂಲಕ ಸಾಹಿಬ್ಝಾದ ಫರ್ಹಾನ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.