ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ ವೈಯಕ್ತಿಕ ಬದುಕಿನಲ್ಲಿ ಬಿರುಕು ಉಂಟಾಗಿದ್ದು, ಈ ದಂಪತಿಗಳು ವಿಚ್ಛೇದನ ಪಡೆಯಲ್ಲಿದ್ದಾರೆ ಎಂಬ ಸುದ್ದಿ ಎರಡೂ ದೇಶಗಳಲ್ಲೂ ಸಖತ್ ಚರ್ಚೆ ಹುಟ್ಟುಹಾಕಿದೆ. ಅಲ್ಲದೆ ಎರಡೂ ದೇಶಗಳ ಮಾಧ್ಯಮಗಳು ಈ ಬಗ್ಗೆ ವರದಿ ಮಾಡುತ್ತಿವೆ. ಆದರೆ ಈ ನಡುವೆ ಈ ಜೋಡಿಗೆ ಸಂಬಂಧಿಸಿದ ಹೊಸ ಸುದ್ದಿಯೊಂದು ಹೊರಬಿದ್ದಿದೆ.
ವಿಚ್ಛೇದನದ ಸುದ್ದಿಯ ನಡುವೆ, ಈ ಜೋಡಿಯ ಹೊಸ ಶೋ ಪಾಕಿಸ್ತಾನದಲ್ಲಿ ಪ್ರಸಾರವಾಗಲಿದೆ. ಈ ಕಾರ್ಯಕ್ರಮದ ಹೆಸರು 'ಮಿರ್ಜಾ ಮಲಿಕ್ ಶೋ' ಆಗಿದ್ದು, ಇದರಲ್ಲಿ ದಂಪತಿಗಳಿಬ್ಬರು ಕಾಣಿಸಿಕೊಳ್ಳಲಿದ್ದಾರೆ. ಈ ಶೋ ಪಾಕಿಸ್ತಾನದ ಉರ್ದುಫ್ಲಿಕ್ಸ್ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ನಲ್ಲಿ ಪ್ರಸಾರವಾಗಲಿದೆ.
ಈ ಶೋ ಬಗ್ಗೆ ಸುದ್ದಿ ಹರಿದಾಡಲಾರಂಭಿಸಿದ ನಂತರ ಅಭಿಮಾನಿಗಳು ದಂಪತಿಗಳಿಬ್ಬರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಈ ಕಾರ್ಯಕ್ರಮದ ಟಿಆರ್‌ಪಿ ಹೆಚ್ಚಿಸುವ ಸಲುವಾಗಿ ಉದ್ದೇಶಪೂರ್ವಕವಾಗಿಯೇ ಈ ದಂಪತಿಗಳು ವಿಚ್ಛೇದನದ ನಾಟಕವನ್ನಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಆದರೆ ಸಾನಿಯಾ ಸದ್ಯ ಪಾಕಿಸ್ತಾನದಲ್ಲಿ ಇಲ್ಲ, ಹಾಗಾಗಿ ಕಾರ್ಯಕ್ರಮದ ಚಿತ್ರೀಕರಣ ಈಗಾಗಲೇ ಮುಗಿದಿದೆ ಎಂಬುದು ಸ್ಪಷ್ಟವಾಗಿದೆ.
ದಂಪತಿಗಳಿಬ್ಬರು ನಟಿಸಿರುವ ಕೆಲವು ಶೋಗಳು ಮತ್ತು ಬ್ರ್ಯಾಂಡ್‌ಗಳ ಕಾನೂನು ತೊಡಕುಗಳಿಂದಾಗಿ ಸಾನಿಯಾ ಮತ್ತು ಶೋಯೆಬ್ ವಿಚ್ಛೇದನವನ್ನು ಖಚಿತಪಡಿಸುತ್ತಿಲ್ಲ ಎಂದು ಕೆಲವು ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದೆ.
ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ 2010 ರಲ್ಲಿ ವಿವಾಹವಾಗಿದ್ದರು. ಆ ಸಮಯದಲ್ಲಿ ಈ ಮದುವೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಸಾನಿಯಾ ಕೂಡ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಈ ಜೋಡಿ ಕಳೆದ 12 ವರ್ಷಗಳಿಂದ ಒಟ್ಟಿಗೆ ಇದ್ದರು. ಹಾಗೆಯೇ 2018 ರಲ್ಲಿ ಇಬ್ಬರೂ ಗಂಡು ಮಗುವಿಗೆ ಪೋಷಕರಾದರು.
Published On - 1:02 pm, Sun, 13 November 22